ರಾಮನಗರ: ಕರೊನಾ ಮಹಾಮಾರಿ ವಿರುದ್ಧದ ಲಸಿಕೆಯ ಚಿಂತೆಯೇ ಎಲ್ಲರದ್ದೂ ಆಗಿದ್ದು, ಯಾರಿಗೆ ಮೊದಲು ದೊರೆಯಲಿದೆ ಎನ್ನುವ ಚರ್ಚೆಗಳು ನಡೆದಿದ್ದು ಜಿಲ್ಲೆಯ 8405 ಮಂದಿಗೆ ಲಸಿಕೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧವಾಗಿದೆ.
ಕಳೆದ 10 ತಿಂಗಳಿಂದ ವಿಶ್ವವನ್ನೇ ಕರೊನಾ ಹೈರಾಣಾಗಿಸಿದೆ. ಇದರ ನಡುವೆ, ಬ್ರಿಟನ್ (ರೂಪಾಂತರಿ) ವೈರಾಣು ಪತ್ತೆಯಾಗುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಲಸಿಕೆ ಪಡೆಯುವ ಧಾವಂತದಲ್ಲಿದ್ದಾರೆ. ಇದಕ್ಕಾಗಿ ಮೊದಲ ಆದ್ಯತೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಂದ ಗ್ರೂಪ್ ಡಿ ನೌಕರರವರೆಗೂ ಲಸಿಕೆ ನೀಡಲಾಗುತ್ತದೆ.
ಎರಡನೇ ಆದ್ಯತೆ ಪಟ್ಟಿಯಲ್ಲಿ ಪತ್ರಕರ್ತರು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರನ್ನು ಪರಿಗಣಿಸಲಾಗಿದೆ. ಇದರೊಟ್ಟಿಗೆ ಸರ್ಕಾರಿ ನೌಕರರಿಗೂ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. 3ನೇ ಪಟ್ಟಿಯಲ್ಲಿ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಅಂದರೆ, 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆ. ಇದರ ಜತೆಗೆ 50 ವರ್ಷಕ್ಕಿಂತ ಕಿರಿಯರಾದ, ಬಿಪಿ, ಶುಗರ್, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗಿರುವವರಿಗೆ ಲಸಿಕೆ ನೀಡಲಾಗುತ್ತದೆ.
8405 ಮಂದಿಗೆ ಲಸಿಕೆ: ಲಸಿಕೆ ಯಾರಿಗೆ ನೀಡಬೇಕು ಎನ್ನುವ ಸಂಬಂಧ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹೆಸರು, ಉದ್ಯೋಗದ ಐಡಿ ಕಾರ್ಡ್, ಮತ್ತು ಆಧಾರ್ ಕಾರ್ಡ್‌ಗಳನ್ನು ನಮೂದಿಸಿ, ಜಿಲ್ಲಾ ಆರ್‌ಸಿಎಚ್ ಕಚೇರಿಗೆ ರವಾನಿಸಿದೆ. ಎಲ್ಲರ ಮಾಹಿತಿಯನ್ನು ಕ್ರೋಡೀಕರಿಸಿ ಸಿಬ್ಬಂದಿ ಆನ್‌ಲೈನ್ ಮೂಲಕ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 8405 ಮಂದಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಒಟ್ಟು 394 ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಮತ್ತು ಶಾಲೆಗಳಲ್ಲಿ ಗುರುತಿಸಲಾಗಿದೆ. ವ್ಯಾಕ್ಸಿನ್ ನೀಡಲು 586 ಮಂದಿಯನ್ನು ಗುರುತಿಸಲಾಗಿದ್ದು, ಇಂಜೆಕ್ಷನ್ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಟಾಸ್ಕ್‌ಪೋರ್ಸ್ ಮೀಟಿಂಗ್: ಲಾನುಭವಿಗಳನ್ನು ಗುರುತಿಸುವುದು, ಸಿದ್ಧತೆ ಮಾಡಿಕೊಂಡಿರುವ ಕುರಿತು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ತನಕ ಒಟ್ಟು ಎರಡು ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸಿದ್ಧತೆ ಮತ್ತು ಚಿಕಿತ್ಸೆ ನೀಡಲು ತಯಾರಿ ಕುರಿತು ಮಾಹಿತಿ ವಿನಿಮಯವಾಗಿದೆ.
ಎಇಎಫ್‌ಐ ತಜ್ಞರ ಸಮಿತಿ: ಎಇಎಫ್‌ಐ ತಜ್ಞರ ಸಮಿತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚನೆ ಮಾಡಲಾಗಿದೆ. ಲಸಿಕೆ ಪಡೆದ ಮೇಲೆ, ಯಾವುದಾದರು ಅಡ್ಡಪರಿಣಾಮ ಅಥವಾ ತೊಂದರೆಯಾದರೆ, ಅವರ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ. ಲಸಿಕೆ ಪಡೆದ ನಂತರ ತೊಂದರೆ ಆದರೆ, ಸ್ಥಳೀಯ ಆಶಾ ಕಾರ್ಯಕರ್ತೆಯರು ಅಥವಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕಾಗುತ್ತದೆ.
ತರಬೇತಿ: ಔಷಧ ನೀಡುವ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ತಜ್ಞ ಸಿಬ್ಬಂದಿ ಗುರುತಿಸಿ, ಅವರಿಗೆ ತರಬೇತಿ ನೀಡಿದೆ. ಇವರಲ್ಲಿ ಪ್ರಯೋಗಾಲಯದ ಸಿಬ್ಬಂದಿ, ಕಿರಿಯ ಹಾಗೂ ಹಿರಿಯ ದಾದಿಯರು, ಸ್ಟಾಫ್ ನರ್ಸ್, ಖಾಸಗಿ ಹಾಗೂ ಸರ್ಕಾರಿ ವೈದ್ಯರು ಸೇರಿದ್ದಾರೆ.
ಕೋವಿಡ್ ವಿರುದ್ಧದ ಲಸಿಕೆ ನೀಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಲಸಿಕೆ ದೊರೆಯುತ್ತಿದ್ದಂತೆ ನೀಡಲು ಮುಂದಾಗುತ್ತೇವೆ. ಡಾ.ಪದ್ಮ ಜಿಲ್ಲಾ ಆರ್‌ಸಿಎಚ್, ಅಧಿಕಾರಿ ರಾಮನಗರ