ಜಿಲ್ಲೆ

ಅಪಹೃತ ಮರದ ವ್ಯಾಪಾರಿ ರಕ್ಷಣೆ ಇಬ್ಬರ ಬಂಧನ, 2 ಕಾರು ವಶ ಉಳಿದವರ ಪತ್ತೆಗೆ ಕಾರ್ಯಾಚರಣೆ

ಕನಕಪುರ

ನಗರದ ರೈಸ್‌ಮಿಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ಮರದ ವ್ಯಾಪಾರಿ ಅಪಹರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಇಬ್ಬರನ್ನು ಬಂಧಿಸಿ ವ್ಯಾಪಾರಿಯನ್ನು ರಕ್ಷಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸುಶೀಲ್ ರಕ್ಷಿಸಲ್ಪಟ್ಟ ವ್ಯಕ್ತಿ. ಆ.10ರಂದು ನಗರದ ರೈಸ್‌ಮಿಲ್ ಬಳಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಕಾರು ತಡೆದು ಸುಶೀಲ್‌ನನ್ನು ಅಪಹರಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಗೌಪ್ಯ ಸ್ಥಳವೊಂದರಲ್ಲಿ ಗೃಹಬಂಧನದಲ್ಲಿ ಇರಿಸಿದ್ದರು.

ಸುಶೀಲ್ ಜತೆಯಲ್ಲಿದ್ದ ಸ್ನೇಹಿತ ಅಪಹರಣಕಾರರಿಂದ ತಪ್ಪಿಸಿಕೊಂಡು ಕನಕಪುರ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಸರ್ಕಲ್ ಇನ್‌ಸ್ಪೆಕ್ಟರ್ ಮಿಥುನ್‌ಶಿಲ್ಪಿ ತನಿಖೆ ಚುರುಕುಗೊಳಿಸಿ ಅಪಹರಣಕಾರರು ಹಾಗೂ ಸುಶೀಲ್ ಶೋಧಕ್ಕೆ ಬಲೆ ಬೀಸಿದ್ದರು.

ಸುಶೀಲ್‌ನನ್ನು ಸ್ಥಳಾಂತರಿಸಲು ಭಾನುವಾರ ಸಾತನೂರು ರಸ್ತೆಯಲ್ಲಿ ಕರೆ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪಹೃತ ಸುಶೀಲ್‌ನನ್ನು ರಕ್ಷಿಸಿ ಜತೆಯಲ್ಲಿದ್ದ ಇಬ್ಬರು ಆರೋಪಿಗಳು, ಇನ್ನೋವಾ ಹಾಗೂ ಮತ್ತೊಂದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರ ಪತ್ತೆಗೆ ಶೋಧ ಮುಂದುವರಿಸಿದ್ದಾರೆ. ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.