ಜಿಲ್ಲೆ

ಕಾಡುಪ್ರಾಣಿ ಹಾವಳಿ ತಡೆಗೆ ತಿಂಗಳ ಗಡುವು ಅರಣ್ಯ ಸಚಿವರ ನಿವಾಸದವರೆಗೆ ಪಾದಯಾತ್ರೆ ಕಕಜವೇ ಎಚ್ಚರಿಕೆ

ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಕೃಷಿ ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರು ಕೃಷಿ ಬಿಟ್ಟು ಜಮೀನನ್ನು ಗುತ್ತಿಗೆ ನೀಡುತ್ತಾರೆ. ಸರ್ಕಾರ ಜಮೀನಿನಲ್ಲಿ ಬೆಳೆಯುವ ಫಸಲಿನ ಆಧಾರದಲ್ಲಿ ವಾರ್ಷಿಕ ಪರಿಹಾರವನ್ನು ಕಟ್ಟುಕೊಡಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ಅಧ್ಯಕ್ಷ ಎಲ್​.ರಮೇಶ್​ ಗೌಡ ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರನ್ನು ಉಳಿಸಿ ಎಂದು ಆಗ್ರಹಿಸಿ ಉಪ ಅರಣ್ಯ ಸಂಕ್ಷರಣಾಧಿಕಾರಿ ಕಚೇರಿ ಎದುರು ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಡಾನೆಗಳನ್ನು ಸಾಕಲು ವನ್ಯಧಾಮಗಳಿವೆ. ಆದರೆ ಕಾಡಾನೆಗಳು ವನ್ಯಧಾಮಗಳನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಬೆಳೆ ಹಾನಿ ಮಾಡಲು ದಾಂಗುಡಿ ಇಡುತ್ತಿವೆ. 2006ರಿಂದ 2023ರವರೆಗೆ 17 ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಸುಮಾರು 200 ಕೋಟಿ ರೂ. ಮೌಲ್ಯದ ಫಸಲು ನಷ್ಟವಾಗಿದ್ದು, 20 ಮಂದಿಯ ದಾಳಿಗೊಳಗಾಗಿದ್ದರೆ, 11 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ ಕರಡಿ, ಚಿರತೆ ದಾಳಿಯಿಂದಲೂ ಜನರು ಗಾಯಗೊಂಡಿದ್ದಾರೆ ಎಂದರು.

ಒಂದು ತಿಂಗಳ ಕಾಲ ಅರಣ್ಯ ಇಲಾಖೆಗೆ ಕಾಲಾವಕಾಶ ನೀಡುತ್ತೇವೆ. ಈ ಅವಧಿಯಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಆನೆಗಳನ್ನು ಜಿಲ್ಲೆಯ ಗಡಿಯಿಂದ ಕಾವೇರಿ ವನ್ಯಧಾಮ, ಬನ್ನೇರುಟ್ಟಕ್ಕೆ ಓಡಿಸಿ ರೈತರಿಗೆ ಮುಕ್ತಿ ನೀಡಬೇಕು. ಇಲ್ಲವಾದರೆ ಸಿಂಗರಾಜಪುರದಿಂದ ಬೆಂಗಳೂರಿನ ಅರಣ್ಯ ಖಾತೆ ಸಚಿವರ ನಿವಾಸದವರಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್​ಗೌಡ ಮಾತನಾಡಿ, ಕಾಡಾನೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಕೆಲ ಭಾಗದಲ್ಲಿ ಸೋಲಾರ್​ ಬೇಲಿ ಅಳವಡಿಸಲು ಅವಕಾಶ ನೀಡಲಾಗಿದೆ. ಆದರೆ ಕಾಡಾನೆಗಳು ಆ ವಿದ್ಯುತ್​ ಶಾಕ್​ಗೆ ಒಳಗಾಗಿ ಕೆರಳಿ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ನಷ್ಟ ಉಂಟುಮಾಡುವ ಜತೆಗೆ ಪ್ರಾಣ ಹಾನಿಗೂ ಕಾರಣವಾಗುತ್ತಿವೆ. ಕಾಡುಪ್ರಾಣಿ ಉಪಟಳ ನಿಯಂತ್ರಿಸಲು ಕೈಗೊಂಡ ಕ್ರಮಗಳಿಂದಲೂ ಕಾಡುಪ್ರಾಣಿಗಳು ಮತ್ತಷ್ಟು ಪ್ರಚೋದನೆಗೊಳಗಾಗುತ್ತಿವೆ ಎಂದರು.

ರೈತ ಅರಳಾಳುಸಂದ್ರ ರಾಜಪ್ಪ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೇದಿಕೆಯ ಉಮಾಶಂಕರ್​, ವೀರೇಶ್​, ಬೆಂಕಿ ಶ್ರೀಧರ್​, ರಂಜಿತ್​ಗೌಡ, ಕೃಷ್ಣೇಗೌಡ, ಸಿಂಗರಾಜಿಪುರದ ಶಂಕರ್​ ಚಾಮರಾಜು, ತಮ್ಮಣ್ಣಗೌಡ ಮೊಗೇನಹಳ್ಳಿ, ಶೋಭಾ ಭೈರಾಪಟ್ಟಣ, ವೆಂಕಟೇಶ್​, ಶೋಭಾ ಸಿಂಗ್​, ನಾಗಲಕ್ಷಿ$್ಮಗೌಡ, ಚಂದ್ರೇಗೌಡ ಭೂಹಳ್ಳಿ ನಿಂಗೇಗೌಡ, ನಾಗವಾರ ಜಯರಾಮಣ್ಣ, ಶಿವಲಿಂಗಯ್ಯ, ಶ್ಯಾಮ್​, ಸುರೇಶ್​ ಮುಂತಾದವರು ಇದ್ದರು.

ಇಲಾಖೆ ನಿಷ್ಕ್ರಿಯಗೊಳಿಸಿ

ವನ್ಯಜಿವಿಗಳು ಕಾಡಿನಿಂದ ನಾಡಿಗೆ ಬಾರದಂತೆ ರಕ್ಷಣೆ ನೀಡಲು ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಈ ಅನುದಾನ ವ್ಯರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲಾಗದ ಅರಣ್ಯ ಇಲಾಖೆಯನ್ನು ನಿಷ್ಕ್ರಿಯಗೊಳಿಸಿ ಈ ಅನುದಾನವನ್ನು ಕಾಡಿನ ಅಂಚಿನಲ್ಲಿರುವ ಜಮೀನಿನ ರೈತರಿಗೆ ವಾರ್ಷಿಕ ಪರಿಹಾರವಾಗಿ ನೀಡಲಿ. ಎಲ್ಲ ರೈತರು ತಮ್ಮ ಆರ್​ಟಿಸಿ ಅನ್ನು ಸರ್ಕಾರಕ್ಕೆ ಒಪ್ಪಿಸುತ್ತಾರೆ ಎಂದು ರಮೇಶ್​ಗೌಡ ಅಸಮಾಧಾನ ವ್ಯಕ್ತಪಡಿಸಿದರು.