ಜಿಲ್ಲೆ

ಮಾ.2ರಿಂದ ಜಿಲ್ಲಾಮಟ್ಟದ ಅಕ್ಷರ ಜಾತ್ರೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ 2 ದಿನ ಆಯೋಜನೆ

ಗಂಗಾಧರ ಬಿ ವಿ

 ರಾಮನಗರ: ಸಾಹಿತ್ಯ ಪರಿಷತ್ ಅನ್ನು ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಮಹದಾಸೆಯೊಂದಿಗೆ ಸಮ್ಮೇಳನವನ್ನು ಹೋಬಳಿಗಳಲ್ಲಿಯೇ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ ಮಾ.2ರಿಂದ ಎರಡು ದಿನ   ಜಿಲ್ಲಾಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹೇಳಿದರು.

ನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಗಳು ಕೇವಲ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗದೆ, ಜನಸಾಮಾನ್ಯರ ಪರಿಷತ್ ಆಗಬೇಕು ಎನ್ನುವ ಹಂಬಲವನ್ನು ಕೇಂದ್ರ ಕಸಾಪ ಅಧ್ಯಕ್ಷರು ಹೊಂದಿದ್ದಾರೆ. ಇದರ ಭಾಗವಾಗಿ ರಾಮನಗರ ಜಿಲ್ಲೆಯಲ್ಲಿ ಈ ಹಿಂದೆಯೇ ಹೋಬಳಿ ಮಟ್ಟದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. ಮಾಗಡಿಯ ಕುದೂರು ಮತ್ತು ತಿಪ್ಪಸಂದ್ರ ಹೋಬಳಿಗಳಲ್ಲೂ ಯಶಸ್ವಿ ಸಮ್ಮೇಳನಗಳು ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಮಾಗಡಿಯ ತಿಪ್ಪಸಂದ್ರದ ಮಾರುತಿ  ಕ್ರೀಡಾಂಗಣದಲ್ಲಿ ಮಾ.2 ಮತ್ತು 3ರಂದು ಜಿಲ್ಲಾಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಗಡಿ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಹೆಬ್ಬೆಳಲು ವಿ. ನಂಜುಡಯ್ಯ ಅವರ ತವರೂರಾಗಿದ್ದು, ಸಿದ್ದಗಂಗಾ ಶ್ರೀಗಳು, ಸಾಲುಮರದ ತಿಮ್ಮಕ್ಕ, ಸಿದ್ದಲಿಂಗಯ್ಯ ಅವರಂತಹ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದ ತಾಲೂಕು. ಈ ಹಿನ್ನೆಲೆಯಲ್ಲಿ ಈ ಬಾರಿಯ ಸಮ್ಮೇಳನಕ್ಕೆ ವಿಶೇಷ ಮೆರುಗು ಇದೆ ಎಂದರು.

ಮಾ.2ರಂದು ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟನೆ ಮಾಡಲಿದ್ದು, ಶಾಸಕ ಎ.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡೋಜ ಡಾ. ಮಹೇಶ್ ಜೋಶಿ ಪುಸ್ತಕ ಬಿಡುಗಡೆ ಮಾಡಲಿದ್ದು, ಹಲವಾರು ಗಣ್ಯರು ಮತ್ತು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬಿ.ಟಿ. ನಾಗೇಶ್ ತಿಳಿಸಿದರು.

ಮೊದಲ ದಿನ ವಿವಿಧ ಗೋಷ್ಠಿಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನ ಕೃಷಿ, ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ ಬಹಿರಂಗ ಅಧಿವೇಶನ, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ರವಾನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ನಾಗೇಶ್ ಮನವಿ ಮಾಡಿದರು.

ಪರಿಷತ್‌ನ ಪದಾಧಿಕಾರಿಗಳಾದ ಕವಣಾಪುರ ರಾಜೇಶ್, ಬಿ.ಟಿ.ರಾಜೇಂದ್ರ,  ಬಾನಂದೂರು ನಂಜುಂಡಿ, ತಾಲೂಕು ಸಮ್ಮೇಳನಾಧ್ಯಕ್ಷ ಜಿ.ಎಚ್. ರಾಮಯ್ಯ, ಶಿವಪುಟ್ಟೇಗೌಡ, ಚಕ್ಕೆರೆ ಪುಟ್ಟಸ್ವಾಮಿ ಮುಂತಾದವರು ಇದ್ದರು.