ಜಿಲ್ಲೆ

ಕಡ್ಡಾಯವಾಗಿ ಕನ್ನಡದಲ್ಲೇ ನಾಮಲಕ ಸರ್ಕಾರಕ್ಕೆ ಕರವೇ ಸ್ವಾಭಿಮಾನಿ ಬಣ ಮನವಿ

ರಾಮನಗರ

ಕಡ್ಡಾಯವಾಗಿ ಕನ್ನಡದಲ್ಲೇ ನಾಮಫಲಕ ಅಳವಡಿಕೆ, ಗಡಿನಾಡು ಹಾಗೂ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಕನ್ನಡ ಶಾಲೆ ಉಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮುಖಂಡರು ಹಾಗೂ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಕೆ.ವಿ. ರಾಜೀವಲೋಚನ ಮನವಿ ಸ್ವೀಕರಿಸಿದರು.

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಯೇ ಅಧಿಕಾರಿಗಳ ಸಮಿತಿ ರಚಿಸಬೇಕು. ಆ ಮೂಲಕ ಸರ್ಕಾರಿ ಕನ್ನಡ ಶಾಲೆಗಳನ್ನು ಉನ್ನತಿಕರಿಸುವುದರ ಜತೆಗೆ, ಮೂಲಸೌಕರ್ಯ ಒದಗಿಸಬೇಕು ಎಂದು ಸಂಟನೆ ಪದಾಧಿಕಾರಿಗಳು ಆಗ್ರಹಿಸಿದರು.

ರಾಜ್ಯದಲ್ಲಿ ಹಲವರು ಕನ್ನಡ ನಾಮಫಲಕ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರಕಾರ ಕಡ್ಡಾಯ ಕನ್ನಡ ನಾಮಫಲಕ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಬೇಕು ಎಂದರು.

ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕು. ಜತೆಗೆ, ತೀರಾ ಹಿಂದುಳಿದಿರುವ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘಟನೆ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಹಿಂದುಳಿದ ಗ್ರಾಮಗಳ 40ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಸಂಘಟನೆಯ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಕಾರ್ಮಿಕ ಘಟಕ ಅಧ್ಯಕ್ಷ ಬಸವರಾಜು ಹವಾಲ್ದಾರ್​, ಜಿಲ್ಲಾಧ್ಯಕ್ಷ ಕಿರಣ್​ಕುಮಾರ್​, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ್​, ಮುಖಂಡರಾದ ಆನಂದ್​, ಸುನಿಲ್​, ಸೋಮೇಶ್​, ದೇವರದೊಡ್ಡಿ ರಾಜು, ನಾಗರಾಜು, ಲಕ್ಷ್ಮೀಶ,  ಪ್ರಮೋದ್​, ವಿನಯ್​, ಮಂಜು ಇದ್ದರು.