ಕನಕಪುರ
ದೇಶೀಯ ಕಲೆ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಅಮೆರಿಕಾದ ವಾಧ್ವಾನಿ ಫೌಂಡೆಷನ್‌ನ ಕಾರ್ಯಕಾರಿ ಉಪಾಧ್ಯಕ್ಷ ರಾಜೀವ್ ವಾರಿಯರ್ ಹೇಳಿದರು.
ನಗರದ ರೂರಲ್ ಕಾಲೇಜಿನಿಂದ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ದೇಶೀಯ ಕಲೆಗಳು ಪುರಾತನ, ಪಾರಂಪರಿಕವಾಗಿ, ಅನೇಕ ವರ್ಷಗಳಿಂದ ಹಿರಿಯರ ಮೂಲಕ ತಲೆಮಾರಿನಿಂದ ತಲೆಮಾರಿಗೆ ಬರುತ್ತಿವೆ. ಕಲೆಗಳನ್ನು ಉಳಿಸಲು ಒಂದೇ ಸೂರಿನಡಿ ಕನ್ನಡ ಸಂಸ್ಕೃತಿ ಇಲಾಖೆ ಜನಪರ ದೇಶೀಯ ವೈವಿಧ್ಯಮಯ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.
ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಕಣ್ಮರೆಯಾಗುತ್ತಿರುವ ದೇಶೀಯ ಸಂಸ್ಕೃತಿ ಮತ್ತು ಕಲೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದರೆ, ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಜಗತ್ತಿನ ನವೀನ ಪರಂಪರೆಯ ವೇಗದಲ್ಲಿ ದೇಶೀಯ ಸಂಸ್ಕೃತಿ ಮತ್ತು ಕಲೆಗಳಿಗೆ ಏನೇ ಅಡ್ಡಿಯಾದರೂ ಇವುಗಳ ಆಚರಣೆಯನ್ನು ಮುಂದುವರೆಸಿಕೊಂಡು ಹೋಗುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕಲೆ, ಸಂಸ್ಕೃತಿ, ದೇಶಾಭಿಮಾನ, ಗುರು-ಹಿರಿಯರಿಗೆ ಗೌರವ ನೀಡುವುದನ್ನು ರೂಢಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಚಿತ್ರನಟಿ ಸಪ್ತಮಿಗೌಡ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳಾಗಿರುವುದರಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಮೂಲಕ ತಾವೂ ಬೆಳೆದು, ಸಂಸ್ಕೃತಿ ಉಳಿಸುವಂತೆ ತಿಳಿಸಿದರು.
ನಿರ್ದೇಶಕ ರಾಮೇಗೌಡ, ಸೂರ್ಯನಾರಾಯಣ ಗೌಡ, ಪುಟ್ಟಸ್ವಾಮಿ, ಮಂಜುನಾಥ್, ಉಪನ್ಯಾಸಕರಾದ ರಾಜಣ್ಣ ಕಣೇಕಲ್, ದೇವರಾಜು, ಅಪ್ಪಾಜಿ, ಮೋಹನ್ ಕುಮಾರ್, ಗಾಯಕ ಉಮೇಶ ಶಿವಾರ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.