ಕನಕಪುರ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಜು.19ರಂದು ಬುಧವಾರ ಬೆಳಗ್ಗೆ 10ಕ್ಕೆ ಮೆರವಣಿಗೆ ಹಾಗೂ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ತಿಳಿಸಿದರು.
ನಗರದ ಕೋಟೆ ಗಣಪತಿ ದೇವಾಲಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೆಲ ವರ್ಷಗಳಿಂದ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ, ಕಂದಾಯ, ಸರ್ವೇ ಸೇರಿ ಇತರ ಇಲಾಖೆಗಳಲ್ಲಿ ಜನರನ್ನು ಅಲೆದಾಡಿಸುತ್ತಿದ್ದಾರೆ. \
ಜಿಡ್ಡು ಹಿಡಿದಿರುವ ಅಧಿಕಾರಿಗಳ ಧೋರಣೆ ಹಾಗೂ ಗ್ಯಾರಂಟಿಗಳ ಅವಾಂತರದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜನತೆಗೆ ಮನವಿ ಮಾಡಿದರು.
ಜಯಕರ್ನಾಟಕ ಜನಪರ ಸಂಘಟನೆಯ ಕುಮಾರಸ್ವಾಮಿ ಮಾತನಾಡಿ, ವಿವಿಧ ಸಂಘಟನೆಗಳ 2 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ನಗರಸಭೆ ಸದಸ್ಯ ಚಂದ್ರು, ಕನ್ನಡ ಪರ ಸಂಘಟನೆಯ ಭಾಸ್ಕರ್, ನಲ್ಲಹಳ್ಳಿ ಶ್ರೀನಿವಾಸ್, ರಮೇಶ್, ಶಿವರಾಜ್, ಸುರೇಶ್, ಮಲ್ಲಿಕಾರ್ಜುನ್, ಅನುಕುಮಾರ್, ಕಾಡಳ್ಳಿ ಅನಿಲ್‌ಕುಮಾರ್, ದುಂಡಯ್ಯ, ಸಂಪತ್ ಮತ್ತಿತರು ಇದ್ದರು.