ಜಿಲ್ಲೆ

ಕಾರ್ಕಳ್ಳಿ ದೇವಾಲಯಕ್ಕೆ ಹೊಸ ಬಸವ

ಗಂಗಾಧರ ಬಿ ವಿ

ಕನಕಪುರ:

ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ಗ್ರಾಮದ ಬಸವನನ್ನು ಕಾರ್ಕಳ್ಳಿ ದೇವಾಲಯದ ಶ್ರೀ ಬಸವೇಶ್ವರ ದೇವಾಲಯಕ್ಕೆ ಕಳಿಸಿಕೊಡಲಾಯಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಾರ್ಕಳ್ಳಿ ದೇಗುಲ ಹಲವು ಪವಾಡಗಳಿಗೆ ಹೆಸರಾಗಿದೆ. ಈ ದೇಗುಲದಲ್ಲಿದ್ದ ಬಸವ ತಿಂಗಳ ಹಿಂದೆ ಮರಣ ಹೊಂದಿತ್ತು. ಈ ಬಸವ ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿತ್ತಲ್ಲದೆ, ಜಮೀನು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಜನಮನ್ನಣೆ ಗಳಿಸಿತ್ತು ಎಂದು ಗ್ರಾಮಸ್ಥರು ತಿಳಿಸಿದರು. ಹೆಗ್ಗನೂರು ದೊಡ್ಡಿ ಗ್ರಾಮದ ಜಗದೀಶ್​ ಅವರು ಸಾಕಿದ್ದ 3 ವರ್ಷದ ಕಾಲಭೈರವ ಬಸವನನ್ನು ಕಾರ್ಕಳ್ಳಿ ಬಸವ ದೇಗುಲಕ್ಕೆ ನೀಡಿದರು. ಧಾರ್ಮಿಕ ದತ್ತಿ ನಿಧಿ ಇಲಾಖೆ ಕಂದಾಯ ನಿರೀಕ್ಷಕ  ಶ್ರೀನಿವಾಸ್​ಮೂರ್ತಿ, ಗ್ರಾಮಲೆಕ್ಕಿಗ ವೀರೇಶ್​ ಸೇರಿ ಕಾರ್ಕಳ್ಳಿ- ದೇವೇಗೌಡನದೊಡ್ಡಿಯ ನೂರಾರು  ಭಕ್ತರು ಬಸವನಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಮುಖಂಡರಾದ ಭೀಮೇಗೌಡ, ತಮ್ಮಣ್ಣ, ರವಿ, ಚನ್ನೇಗೌಡ, ಮಣಿಕೆಗೌಡ, ಮಧು ಸೇರಿದಂತೆ ಅನೇಕ ಊರಗೌಡರು, ಗ್ರಾಮಸ್ಥರು ಇದ್ದರು.