ಕನಕಪುರ
ನಗರದ ರೈತ ಸೇವಾ ಸಹಕಾರ ಸಂಘದಲ್ಲಿ ಠೇವಣಿದಾರರು ಹಾಗೂ ಗ್ರಾಹಕರು ಅಡವಿಟ್ಟ ಚಿನ್ನಾಭರಣಗಳು ನಾಪತ್ತೆಯಾದ ಮತ್ತು ಅವ್ಯವಹಾರ ಸಂಬಂಧ ಸಂಘದ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರ ಮೂವರು ಈಗ ಪೊಲೀಸರ ವಶದಲ್ಲಿದ್ದಾರೆ. ಚಿನ್ನಾಭರಣಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷೆ ಶೀಲಾ ಗೋಪಾಲ್ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಘದ ಕಚೇರಿಗೆ ತೆರಳಿ ಪ್ರಾಥಮಿಕ ತನಿಖೆ ನಡೆಸಿ ಸಿಇಒ ರವಿಕುಮಾರ್, ಸಿಬ್ಬಂದಿ ವೆಂಕಟಪ್ಪ, ಶಿವರುದ್ರ, ಮಂಜುನಾಥ್‌ರೆಡ್ಡಿ ಎಂಬ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಸಂಘದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಚಿನ್ನಾಭರಣ ಅಡವಿಟ್ಟಿದ್ದರು. ಮಂಗಳವಾರ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ವರದಿಯಾಗುತ್ತಿದ್ದಂತೆ, ಚಿನ್ನಾಭರಣ ಅಡವಿಟ್ಟವರು ಸಂಘದ ಕಚೇರಿ ಎದುರು ಜಮಾಯಿಸಿ ಸತ್ಯಾಸತ್ಯತೆ ತಿಳಿಯಲು ಯತ್ನಿಸಿದರು. ಆದರೆ ಸಂಘದ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದ ಕಾರಣ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಹಕಾರ ಸಂಘದ ಸಿಇಒ ರವಿಕುಮಾರ್ ಒಬ್ಬರೇ ಸ್ಥಳೀಯ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸುಮಾರು 25ರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಡವಿಟ್ಟಿರುವುದು ಬೆಳಕಿಗೆ ಬಂದಿದೆ. ರೈತ ಸೇವಾ ಸಹಕಾರ ಸಂಘದ ಗ್ರಾಹಕರ ಒಡವೆಗಳನ್ನು ಸಿಇಒ ರವಿಕುಮಾರ್ ಲಪಟಾಯಿಸಿ ತಮ್ಮ ಮಕ್ಕಳ ಹೆಸರಿನಲ್ಲಿ ಅಡವಿಟ್ಟಿರುವ ಬಗ್ಗೆ ಸ್ವತಃ ಹಣಕಾಸು ಸಂಸ್ಥೆ ಅಧಿಕಾರಿಗಳು ಠಾಣೆಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಂಘದ ನೌಕರರು ನಡೆಸಿರುವ ಅವ್ಯವಹಾರ, ಕಳ್ಳಾಟ ಬೆಳಕಿಗೆ ಬಂದಿದೆ. ಇದರಿಂದ ಒಡವೆ ಅಡವಿಟ್ಟ ಗ್ರಾಹಕರು ಕಂಗಾಲಾಗಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯವರು ತಮ್ಮ ಗಮನಕ್ಕೆ ಬಂದಿಲ್ಲವೆಂದು ಹೇಳುತ್ತಾರೆ.