ಜಿಲ್ಲೆ

ಕೆ.ಪಿ.ದೊಡ್ಡಿ ಗ್ರಾಮಸ್ಥರ ನೀರಿನ ಸಮಸ್ಯೆಗೆ ಪರಿಹಾರ ವಿಜಯವಾಣಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಗ್ರಾಮಸ್ಥರ ಮೆಚ್ಚುಗೆ

 ಕೈಲಾಂಚ (ರಾಮನಗರ)

ಹೋಬಳಿಯ ಕೆ.ಪಿ.ದೊಡ್ಡಿ ಗ್ರಾಮದಲ್ಲಿ ಕೆಟ್ಟುಹೋಗಿದ್ದ ಶುದ್ಧ ನೀರಿನ ಘಟಕಕ್ಕೆ ಜಿಪಂ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿಗಳು ಶನಿವಾರ ಮರು ಚಾಲನೆ ನೀಡಿದ್ದಾರೆ.

ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಪೆಕ್ಸ್ ಅಸೋಸಿಯೆಟ್ಸ್ ಅಡಿಯಲ್ಲಿ ಘಟಕ ನಿರ್ಮಾಣವಾಗಿದೆ. ಆದರೆ ಒಂದು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮಸ್ಥರಿಗೆ ಶುದ್ಧ ನೀರು ಸಿಗುತ್ತಿಲ್ಲ. ಹತ್ತಿರದಲ್ಲಿ ಬೇರೆ ಘಟಕಗಳು ಇಲ್ಲದಿರುವುದರಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಬೋರ್‌ವೆಲ್ ನೀರು ಕುಡಿಯಬೇಕಿದೆ ಎಂದು ಗ್ರಾಮಸ್ಥರು ಜಿಪಂ ಅಧಿಕಾರಿಗಳನ್ನು ಘಟಕ ರಿಪೇರಿ ಮಾಡಿಸುವಂತೆ ಆಗ್ರಹಿಸಿದ್ದರು.

ಗ್ರಾಮಸ್ಥರ ಆಗ್ರಹದ ಹಿನ್ನೆಲೆಯಲ್ಲಿ ಬುಧವಾರ ವಿಜಯವಾಣಿ ಕೆ.ಪಿ.ದೊಡ್ಡಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರ ದುರಸ್ತಿಯಾಗಬೇಕಿರುವ ಬಗ್ಗೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೆ ಶನಿವಾರ ಜಿಪಂ ಅಧಿಕಾರಿಗಳು ಎಚ್ಚೆತ್ತು, ಘಟಕಕ್ಕೆ ಕಾಯಕಲ್ಪ ನೀಡಿದ್ದಾರೆ. ಶೀಘ್ರ ದುರಸ್ತಿ ಮಾಡಿದ ಅಧಿಕಾರಿ ವರ್ಗಕ್ಕೆ, ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿಂದ ಘಟಕ ಕೆಟ್ಟುನಿಂತ ಪರಿಣಾಮ ಜನರಿಗೆ ಶುದ್ಧ ನೀರು ಸಿಗುತ್ತಿರಲಿಲ್ಲ. ಬೇರೆ ಗ್ರಾಮಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇತ್ತು. ವಿಜಯವಾಣಿ ವರದಿ ಪ್ರಕಟಿಸಿದ ಪರಿಣಾಮ ಇಲಾಖೆ ಅಧಿಕಾರಿಗಳ ಗಮನ ಸೆಳೆದು, ಘಟಕಕ್ಕೆ ಕಾಯಕಲ್ಪ ಸಿಗುವಂತಾಗಿದೆ. ಪತ್ರಿಕೆಗೆ ಅಭಿನಂದನೆಗಳು.

ಪ್ರಕಾಶ್ ಗ್ರಾಪಂ ಸದಸ್ಯ, ಕೆ.ಪಿ.ದೊಡ್ಡಿ