ಜಿಲ್ಲೆ

ಗುನ್ನೂರು ಅಂಬೇಡ್ಕರ್​ ವಸತಿ ಶಾಲೆಗೆ ಸಿಸಿ ಕ್ಯಾಮರಾ

ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡ ಶಾಲಾ ಆಡಳಿತ ಪಾಲಕರ ಆಗ್ರಹಕ್ಕೆ ಮನ್ನಣೆ

ಕೈಲಾಂಚ (ರಾಮನಗರ)
ಗುನ್ನೂರು ಗ್ರಾಮದ ಡಾ. ಬಿ.ಆರ್​. ಅಂಬೇಡ್ಕರ್​ ವಸತಿ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಮಕ್ಕಳು, ಪಾಲಕರ ಆಗ್ರಹಕ್ಕೆ ಮನ್ನಣೆ ನೀಡಿದಂತಾಗಿದೆ.


ಕೈಲಾಂಚ ಹೋಬಳಿಯ ಗುನ್ನೂರಿನಲ್ಲಿ 9 ಎಕರೆಯಲ್ಲಿರುವ ಅಂಬೇಡ್ಕರ್​ ವಸತಿ ಶಾಲೆ ಕಳೆದ ಮಾರ್ಚ್​ನಲ್ಲಿ ಉದ್ಘಾಟನೆ ಕಂಡಿತ್ತು. 250 ಹೆಣ್ಣು ಮತ್ತು ಗಂಡು ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರೂ, ಶಾಲೆ ಅರಣ್ಯದಂಚಿನಲ್ಲಿ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾಲಕರು ಸಿಸಿ ಕ್ಯಾಮರಾ ಅಳವಡಿಸುವಂತೆ ಶಾಲಾ ಆಡಳಿತಕ್ಕೆ ಒತ್ತಾಯ ಮಾಡಿದ್ದರು.

ರಾಮನಗರದ ಚಾಮುಂಡಿ ಪುರದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಈಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿ 5 ತಿಂಗಳು ಕಳೆದರೂ ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂದು ಪಾಲಕರು ಬೇಸರ ಹೊರ ಹಾಕಿದ್ದರು. ಪಾಲಕರ ಆತಂಕದ ಬಗ್ಗೆ ವಿಜಯವಾಣಿ ಜು.24ರ ಸಂಚಿಕೆಯಲ್ಲಿ "ಸಿಸಿ ಕ್ಯಾಮರಾ ಕಣ್ಗಾವಲಿಗೆ ಬೇಡಿಕೆ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಬಂದ ಮೂರು ದಿನಗಳಲ್ಲೇ ಈ ಹಿಂದೆ ಶಾಲೆ ನಡೆಯುತ್ತಿದ್ದ ಬಾಡಿಗೆ ಕಟ್ಟಡದಲ್ಲಿದ್ದ ಎಂಟು ಕ್ಯಾಮರಾಗಳನ್ನು ತಂದು ಹೊಸ ಕಟ್ಟಡದ ಆಯ್ದ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಶಾಲಾ ಆಡಳಿತದ ಕ್ರಮಕ್ಕೆ ಪಾಲಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವಸತಿ ನಿಲಯದ ಎಂಟು ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಕ್ಕಳ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ. ಅಗತ್ಯವಿದ್ದರೆ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ಮತ್ತಷ್ಟು ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
 ಹನುಮಂತಯ್ಯ, ಹೆಚ್ಚುವರಿ ಪ್ರಾಂಶುಪಾಲ, ಡಾ.ಬಿ.ಆರ್​.ಅಂಬೇಡ್ಕರ್​ ವಸತಿ ಶಾಲೆ, ಗುನ್ನೂರು

ಬಹುದಿನಗಳಿಂದಲೂ ಒತ್ತಾಯ ಮಾಡುತ್ತಿದ್ದರೂ ವಸತಿ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ವಿಜಯವಾಣಿ ವರದಿಯಿಂದಾಗಿ ಈಗ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಮಕ್ಕಳ ಬಗ್ಗೆ ಇದ್ದ ದುಗುಡ ವಿಜಯವಾಣಿ ವರದಿಯಿಂದಾಗಿ ದೂರವಾಗಿದೆ. ಪತ್ರಿಕೆ ಸಮಾಜಮುಖಿ ಕಾರ್ಯ ಮೆಚ್ಚುವಂಥದ್ದು. ವರದಿ ಪ್ರಕಟಿಸಿದ ವಿಜಯವಾಣಿಗೆ ಧನ್ಯವಾದಗಳು.  ಜಯರಾಂ, ಪಾಲಕ, ಲಕ್ಕಪ್ಪನಹಳ್ಳಿ