ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂವರಿಗೆ ಸೋಂಕು ದೃಢಪಟ್ಟಿದೆ. ಎಲ್ಲರೂ ರಾಮನಗರ ಜೈಲು ಸಿಬ್ಬಂದಿಯಾಗಿದ್ದು, ಪ್ರಕರಣಗಳ ಸಂಖ್ಯೆ 15ಕ್ಕೆ ಏರಿಕೆ ಆಗಿದೆ.
ಚನ್ನಪಟ್ಟಣ ತಾಲೂಕಿನ ಶ್ಯಾನುಭೋಗನಹಳ್ಳಿಯ ತರಬೇತಿನಿರತ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸೋಂಕು ದೃಢಪಟ್ಟಿತ್ತು. ಇದಾದ ನಂತರ ಈತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರಿಗೆ ಸೋಂಕು ಪತ್ತೆಯಾಗಿತ್ತು. ಇದೀಗ ಮತ್ತೆ ಮೂವರಲ್ಲಿ ದೃಢಪಟ್ಟಿರುವುದು ಆತಂಕ ಹೆಚ್ಚುವಂತೆ ಮಾಡಿದೆ.
ಚನ್ನಪಟ್ಟಣದಲ್ಲಿ ಅತಿ ಹೆಚ್ಚು: ಜಿಲ್ಲೆಯ 15 ಪ್ರಕರಣಗಳ ಪೈಕಿ ಚನ್ನಪಟ್ಟಣದಲ್ಲಿಯೇ 7 ಸೋಂಕಿತರಿದ್ದಾರೆ. ವಾರದ ಹಿಂದೆ ಶಾನುಭೋಗನಹಳ್ಳಿಯಲ್ಲಿ ವಾಸವಿದ್ದ ಜಿಲ್ಲಾ ಕಾರಾಗೃಹ ನೌಕರನಿಗೆ ಸೋಂಕು ದೃಢಪಟ್ಟಿತ್ತು. ಈತನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ ಮೂವರಲ್ಲಿ ಮಂಗಳವಾರ ಸೋಂಕು ಪತ್ತೆಯಾಗಿತ್ತು. ಮತ್ತೆ ಇದೀಗ ಈತನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ಹರಡಿದೆ. ಶುಕ್ರವಾರ ಪತ್ತೆಯಾದ ಸೋಂಕಿತರು ಕ್ವಾರೆಂಟೈನ್ ಕೇಂದ್ರದಲ್ಲಿದ್ದರು.
ಗೊಂದಲದಲ್ಲಿ ಅಧಿಕಾರಿಗಳು: ಶುಕ್ರವಾರ ಪತ್ತೆಯಾಗಿರುವ ಪ್ರಕರಣಗಳನ್ನು ಯಾವ ತಾಲೂಕಿನ ಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾಡಳಿತ ಗೊಂದಲದಲ್ಲಿದೆ. ಇದರಲ್ಲಿ ಇಬ್ಬರು ಪುರುಷರು, ಓರ್ವ ಮಹಿಳೆ. ಅಷ್ಟು ಮಾತ್ರವಲ್ಲದೆ, ಈ ಮೂವರು ಜೈಲಿನ ವಸತಿ ಸಮುಚ್ಚಯದಲ್ಲೇ ಇದ್ದರು. ಕಳೆದ 14 ದಿನಗಳ ಟ್ರಾವೆಲ್ ಹಿಸ್ಟರಿಯಲ್ಲೂ ಇವರು ಎಲ್ಲಿಗೂ ಪ್ರಯಾಣಿಸಿಲ್ಲ ಎನ್ನುವುದು ನೆಮ್ಮದಿ ವಿಚಾರ.
ಜೈಲಿಗೆ ಕರೊನಾ ನಂಟು: ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದು ರಾಮನಗರ ಕಾರಾಗೃಹದಲ್ಲಿಯೇ. ಪಾದರಾಯನಪುರ ಪುಂಡರನ್ನು ರಾಮನಗರಕ್ಕೆ ಕರೆ ತಂದಾಗ ಇವರಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿತ್ತು. ಅಲ್ಲದೆ, ಸೋಂಕಿತರನ್ನು ರಾಮನಗರಕ್ಕೆ ಕರೆತಂದದ್ದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ 137 ಆರೋಪಿಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿತ್ತು. ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿ 60ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಟ್ಟಿತ್ತು. ಆದರೆ ಈಗ ನಾಲ್ವರು ಜೈಲು ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.
ಸೀಲ್‌ಡೌನ್ ಭಯವಿಲ್ಲ: ಜಿಲ್ಲೆಯಲ್ಲಿ ಸೋಂಕಿತನ ಸಂಪರ್ಕದಲ್ಲಿ ಇದ್ದವರಿಗೆ ಸೋಂಕು ಹರಡುತ್ತಿದ್ದು, ಸಾರ್ವಜನಿಕರು ದಿಗಿಲುಗೊಂಡಿದ್ದಾರೆ. ಆದರೆ, ಬುಧವಾರದ 5 ಪ್ರಕರಣ ಹಾಗೂ ಶುಕ್ರವಾರದ ಮೂರು ಪ್ರಕರಣಗಳಲ್ಲಿನ ಎಲ್ಲರೂ ಕ್ವಾರಂಟೈನ್‌ನಲ್ಲಿದ್ದವರೇ ಆಗಿರುವುದರಿಂದ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಸೀಲ್‌ಡೌನ್ ಮಾಡುವ ಇಲ್ಲವೆ, ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸೋಂಕಿನ ಹಿನ್ನೆಲೆ: ಚನ್ನಪಟ್ಟಣ ತಾಲೂಕು ಶ್ಯಾನುಭೋಗನಹಳ್ಳಿ ನಿವಾಸಿ ತರಬೇತಿನಿರತ ಪೇದೆ ಮತ್ತೆ ತರಬೇತಿಗೆ ಹಾಜರಾಗಲು ಹೋದಾಗ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಈತನ ಸಂಪರ್ಕದಲ್ಲಿದ್ದ 24 ಮಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಇವರಲ್ಲಿ 24, 26 ಹಾಗೂ 27 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಇದು ಸಮುದಾಯಕ್ಕೆ ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಕ್ವಾರಂಟೈನ್‌ನಲ್ಲಿಯೇ ಪತ್ತೆಯಾಗಿರುವುದು ಸಮಾಧಾನ ತರಿಸಿದೆ.