ರಾಮನಗರ
ನಾಗೇಗೌಡರು ನಿರ್ಮಿಸಿದ ಜಾನಪದ ಲೋಕ ಮಾದರಿಯಲ್ಲೇ ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದರು.
ರಾಮನಗರದ ಜಾನಪದ ಲೋಕಕ್ಕೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿ, ರಾಮನಗರದ ಜಾನಪದ ಲೋಕ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಎರಡು ಕೋಟಿ ರೂ. ಘೋಷಣೆ ಮಾಡಿದೆ. ಇಲ್ಲಿನ ಜಾನಪದ ಲೋಕದ ಮಾದರಿಯನ್ನು ವೀಕ್ಷಿಸಿ, ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಜಾನಪದ ಲೋಕ ವೀಕ್ಷಣೆಗಾಗಿಯೇ ಹಲವು ಪ್ರವಾಸಿಗರು ಆಗಮಿಸುತ್ತಾರೆ. ನೂತನ ಹೆದ್ದಾರಿಗೂ, ಇದಕ್ಕೂ ಸಂಬಂಧ ಇಲ್ಲ. ಜಾನಪದ ಲೋಕದ ಪರವಾಗಿ ಮತ್ತಷ್ಟು ಪ್ರಚಾರ ನೀಡುವ ಕೆಲಸ ಮಾಡಲಾಗುತ್ತದೆ. ಜಾನಪದ ಲೋಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕಾಯಂಗೆ ಮನವಿ ಸಲ್ಲಿಸಿದರೆ ಸರ್ಕಾರ ಪರಿಶೀಲನೆ ನಡೆಸುತ್ತದೆ. ಜಾನಪದ ಲೋಕದ ಮತ್ತಷ್ಟು ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತದೆ ಎಂದರು.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ನ.1ಕ್ಕೆ 50 ವರ್ಷವಾಗುತ್ತಿದೆ. ಹಾಗಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಲ್ಲಿ ಇಲಾಖೆ ವತಿಯಿಂದ ವರ್ಷ ಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈ ಸಂಬಂಧ ಸಮಿತಿ ರಚನೆ ಮಾಡಲಾಗಿದೆ. ಕಾರ್ಯಕ್ರಮ ವರ್ಷ ಪೂರ್ತಿ ನಡೆಯುವುದರಿಂದ ಆ ಸಂಭ್ರಮ ಆಚರಣೆ ಮಾಡುವ ಸಂಬಂಧ ಇಲಾಖೆ ವಿಭಾಗವಾರು ಹೋರಾಟಗಾರರು, ಕಲಾವಿದರನ್ನು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಳಗಾವಿ, ಬೆಂಗಳೂರು, ಕಲಬುರಗಿ ವಿಭಾಗದಲ್ಲಿ ಸಭೆ ಮಾಡಿದ್ದೇನೆ. ಅಲ್ಲಿನ ಸಾಹಿತಿಗಳು, ಕಲಾವಿದರು, ಹೋರಾಟಗಾರರ ಸಲಹೆ ಪಡೆಯಲಾಗಿದೆ. ಸೋಮವಾರ ಮೈಸೂರು ವಿಭಾಗದ ಸಭೆ ಆಯೋಜಿಸಲಾಗಿದೆ. ಇದಾದ ನಂತರ ನಾಲ್ಕು ವಿಭಾಗದ ಸಭೆಯಲ್ಲಿ ಅಭಿಪ್ರಾಯ ಕ್ರೋಡೀಕರಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುತ್ತದೆ. ಶೀಘ್ರದಲ್ಲಿ ಕಾರ್ಯಕ್ರಮದ ರೂಪುರೇಷೆ ತಿಳಿಸಲಾಗುತ್ತದೆ ಎಂದರು.
ಜಾನಪದ ಲೋಕಕ್ಕೆ ಆಗಮಿಸಿದ ಸಚಿವರು, ನಾಗೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮ್ಯೂಸಿಯಂ, ಕಲಾಕೃತಿಗಳು, ಗಿರಿಜನ ಲೋಕ, ಲೋಕಮಾತಾ ಮಂದಿರ, ಲೋಕಮಹಲ್, ಚಿತ್ರ ಕುಟೀರ, ಲೋಕಸಿರಿ, ಕುಂಬಾರಿಕೆ ಪ್ರಾತ್ಯಕ್ಷಿಕೆ ವೀಕ್ಷಣೆ ನಡೆಸಿ ಮಾಹಿತಿ ಪಡೆದರು. ಜಾನಪದ ಲೋಕದ ಅಧಿಕಾರಿಗಳು ಆಡಳಿತ ಮಂಡಳಿಯವರು ಸಚಿವರಿಗೆ ಜಾನಪದ ಕಲಾ ಮೇಳದ ಸ್ವಾಗತ ಕೋರಿದರು.
ರಂಗಸಹಾಯಕ ಪ್ರದೀಪ್, ವಾಣಿಜ್ಯ ತೆರಿಗೆ ನಿವೃತ್ತ ಆಯುಕ್ತ ಮುಕುಂದರಾವ್, ಮಂಡ್ಯ ಜಿಲ್ಲಾ ಘಟಕ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ನಾಗಮಂಗಲ ಮಂಜೇಶ್, ಕಲ್ಪನಾಸ ಶಿವಣ್ಣ ಇದ್ದರು.