ಜಿಲ್ಲೆ

ಆರೋಗ್ಯದ ಕಡೆ ಗಮನವಿರಲಿ ಮಿಷನ್​ ಇಂದ್ರಧನುಷ್​ ಅಭಿಯಾನದಲ್ಲಿ ಶಾಸಕ ಇಕ್ಬಾಲ್​ ಹುಸೇನ್​ ಅಭಿಪ್ರಾಯ

ರಾಮನಗರ: ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕಿದ್ದು, ಪ್ರಸ್ತುತ ಎಲ್ಲರಿಗೂ ದೊಡ್ಡ ವಿಷಯ ಆರೋಗ್ಯವಾಗಿದೆ ಎಂದು ಶಾಸಕ ಇಕ್ಬಾಲ್​ ಹುಸೇನ್​ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಮಟ್ಟದ ಮಿಷನ್​ ಇಂದ್ರಧನುಷ್​ ಅಭಿಯಾನ 5.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ವಿವಿಧ ರೀತಿಯ ಊಟಗಳನ್ನು ಮಾಡಿದರೂ ಇಂದು ತಿಂದರೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹಿಂದೆ ಸೊಪ್ಪು, ರಾಗಿ, ಗಂಜಿ ಕುಡಿದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ, ನಮ್ಮ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿದೆ. ಮನುಷ್ಯನಿಗೆ ಪ್ರಮುಖವಾಗಿ ಬೇಕಿರುವುದು ಆರೋಗ್ಯ. ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹುಟ್ಟಿದ ಮಗುವಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ 2 , 5 ವರ್ಷದ ಒಳಗಿನ ಮಕ್ಕಳಿಗೆ ಇಂದ್ರಧನುಷ್​ ಕಾರ್ಯಕ್ರಮದ ಮೂಲಕ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ಈ ಆರೋಗ್ಯ ಕಾರ್ಯಕ್ರಮದಲ್ಲಿ ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಆರೋಗ್ಯ ನಿರೀಕ್ಷಕರ ಜತೆ ಕೈ ಜೋಡಿಸಿ ಎಂದರು.

ಜಿಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರಗಳು, ಅಂಗನವಾಡಿಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಾಂತರಾಜು ಮಾತನಾಡಿ, ಕಳೆದ ಒಂದು ತಿಂಗಳಿಂದ ಮನೆಮನೆ ಸರ್ವೇ ಮಾಡಿ, ಲಸಿಕೆಯಿಂದ ವಂಚಿತರಾದವರನ್ನು ಗುರುತಿಸಿ, ಜಿಲ್ಲೆಯಾದ್ಯಂತ 515 ಕೇಂದ್ರಗಳಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬ ಧ್ಯೇಯದಲ್ಲಿ ಆಗಸ್ಟ್​, ಸೆಪ್ಟೆಂಬರ್​, ಅಕ್ಟೋಬರ್​ ತಿಂಗಳಲ್ಲಿ ಮೂರು ಸುತ್ತಿನಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಗರ್ಭಿಣಿ ಹಾರೈಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದರು.

ಜಿಲ್ಲಾ ಶಸಚಿಕಿತ್ಸಕಿ ಡಾ.ಪದ್ಮಾ ಮಾತನಾಡಿ, ಮಕ್ಕಳಿಗೆ ಲಸಿಕೆ ಹಾಕಿಸಲು ಪಾಲಕರು ಹೆದರಿಕೆ, ಹಿಂಜರಿಕೆ ವ್ಯಕ್ತಪಡಿಸುತ್ತಾರೆ. ಸರ್ಕಾರದ ಕಾರ್ಯಕ್ರಮ ಉತ್ತಮವಾಗಿದೆ. ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು. ಸಾರ್ವಜನಿಕರು ಅಕ್ಕಪಕ್ಕದ ಮನೆಯ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್​, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಶಶಿಕಲಾ, ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಮಂಜುನಾಥ್​, ವೈದ್ಯರಾದ ಡಾ.ಶಶಿಧರ್​, ಡಾ.ಕುಮಾರ್​, ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್​, ನಿರೀಕ್ಷಕ ಅಧಿಕಾರಿ ವಿನಯ್​ಕುಮಾರ್​ ಇದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆಗೆ ಆಗಮಿಸಿರುವುದನ್ನು ಕಣ್ಣಾರೆ ಕಾಣುತ್ತಿದ್ದೇನೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಜನರಿಗೆ ಸಿಗಬೇಕಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವೈದ್ಯಕಿಯ ಸಚಿವರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಪರಿಹಾರಕ್ಕೆ ಶ್ರಮಿಸುತ್ತೇನೆ.

 ಇಕ್ಬಾಲ್​ ಹುಸೇನ್​, ಶಾಸಕ