ರಾಮನಗರ
ಫೆ.24ರಿಂದ ಮೂರು ದಿನ ಜಿಲ್ಲಾ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಹಲವಾರು ವರ್ಷಗಳಿಂದಲೂ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಕರೊನಾ ಕಾರಣದಿಂದಾಗಿ ಇದಕ್ಕೆ ಕಡಿವಾಣ ಬಿದ್ದಿತ್ತು. ಈ ಬಾರಿ ಕಾರ್ಯಕ್ರಮಕ್ಕೆ ಮರುಚಾಲನೆ ದೊರೆತಿದ್ದು, ಜಿಲ್ಲಾ ತೋಟಗಾರಿಕೆ ಸಂಘದ ಸಹಕಾರದೊಂದಿಗೆ ೆ.24ರಿಂದ 26ರವರೆಗೆ ಪ್ರದರ್ಶನ ನಡೆಯಲಿದೆ.
ಹಲವು ಆಕರ್ಷಣೆ
ಫಲಪುಷ್ಪ ಪ್ರದರ್ಶನದಲ್ಲಿ ಚನ್ನಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಮಳೂರು ಅಪ್ರಮೇಯ ದೇವಸ್ಥಾನ, ರಾಮದೇವರ ಬೆಟ್ಟದ ರಣಹದ್ದು ಪಕ್ಷಿಧಾಮ, ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳ ಪ್ರದರ್ಶಿಕೆ, ಮಕ್ಕಳ ಮನರಂಜನಾ ಕಲಾಕೃತಿಗಳು, ವೈವಿಧ್ಯಮಯ ಅಲಂಕಾರಿಕ ಹೂ ಕುಂಡಗಳ ಜೋಡಣೆ ಹಾಗೂ ವಿವಿಧ ಅಲಂಕಾರಿಕ ತರಕಾರಿ ಕೆತ್ತನೆ ಮತ್ತು ಇಕೆಬಾನ ಪ್ರದರ್ಶನ ಆಯೋಜಿಸಲಾಗಿದೆ.
ರಾಮದೇವರ ಬೆಟ್ಟ ಮಾದರಿಯ ಪ್ರವೇಶ ದ್ವಾರ ಈ ಬಾರಿಯ ವಿಶೇಷ. ಬೆಟ್ಟದ ಹಿನ್ನೆಲೆ ಹಾಗೂ ಮೇಲ್ಭಾಗದಲ್ಲಿ ರಣಹದ್ದಿನ ಆಕೃತಿಯನ್ನು ಒಳಗೊಂಡ ಪ್ರವೇಶ ದ್ವಾರ ನಿರ್ಮಿಸಲು ಉದ್ದೇಶಿಸಲಾಗಿದೆ. ಒಳಗೆ ಹೂವುಗಳಿಂದ ನಿರ್ಮಿಸಲಾದ ಪಟ್ಟಾಭಿರಾಮ ದೇಗುಲದ ಮಾದರಿ ಇರಲಿದೆ. ನಟ ಪುನೀತ್ ರಾಜ್‌ಕುಮಾರ್ ಸ್ಮರಿಸುವ ಹಾಗೂ ಮಲೆ ಮಹದೇಶ್ವರನ ಸನ್ನಿಧಿಯ ಚಿತ್ರಣವೂ ಸಿಗಲಿದೆ. ಉಳಿದಂತೆ ಸಾರ್ವಜನಿಕರಿಗಾಗಿ ಸೆಲ್ಫಿ ಸ್ಪಾಟ್ ನಿರ್ಮಾಣವಾಗಲಿದೆ.
ಮಳಿಗೆಗಳಲ್ಲಿ ಪ್ರದರ್ಶನ
ವಿವಿಧ ಮಳಿಗೆಗಳ ಮೂಲಕ ಸರ್ಕಾರದ ಯೋಜನೆಗಳು, ಉತ್ಪನ್ನಗಳ ಪ್ರದರ್ಶನವೂ ಇರಲಿದೆ. ತೋಟಗಾರಿಕೆ ಇಲಾಖೆ ಜತೆಗೆ ಕೃಷಿ, ಪಶು ಸಂಗೋಪನೆ, ಪಂಚಾಯತ್ ರಾಜ್ ಸೇರಿ ವಿವಿಧ ಇಲಾಖೆಗಳ 20ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಜತೆಗೆ ಖಾಸಗಿ ವ್ಯಕ್ತಿ ಸಂಸ್ಥೆಗಳ 25ಕ್ಕೂ ಹೆಚ್ಚು ಮಳಿಗೆಗಳು ಇರುವ ನಿರೀಕ್ಷೆ ಇದೆ. ಈ ಬಾರಿಯ ನರೇಗಾ ಮಾದರಿ ಗ್ರಾಮದ ಮೇಳದ ಆಕರ್ಷಣೆಯಾಗಲಿದೆ.
ಕಾರ್ಯಾಗಾರ
ಮೇಳದಲ್ಲಿ ಯಶಸ್ವಿ ಕೃಷಿ ಸಾಧಕರು ಮತ್ತು ಅವರ ಕೃಷಿ ಯಶೋಗಾಥೆ ಕುರಿತ ಪ್ರದರ್ಶನ ನಡೆಯಲಿದೆ. ರೈತರಿಗೆ ಉಪಕಾರಿಯಾಗಿರುವ ಆಡು, ಕುರಿ, ಹಸು, ಎತ್ತಿನ ತಳಿಗಳನ್ನು ಫಲ ಪುಷ್ಪ ಪ್ರದರ್ಶನದ ವೇಳೆ ರೈತರು ಮತ್ತು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಕೃಷಿ ಆಸಕ್ತರಿಗಾಗಿ ದಿನವಿಡೀ ತಾಂತ್ರಿಕ ಕಾರ್ಯಾಗಾರ ನಡೆಯಲಿದ್ದು, ಕೃಷಿ ವಿಜ್ಞಾನಿಗಳ ಜತೆಗೆ ಪ್ರಗತಿಪರ ರೈತರೂ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಪ್ರದರ್ಶನ ನಡೆಯವು ಮೂರು ದಿನ ಸಂಜೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಎರಡು ವರ್ಷಗಳಿಂದ ಕರೊನಾ ಕಾರಣದಿಂದ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಆದರೆ ಈ ಬಾರಿ ವಿಭಿನ್ನ ಹಾಗೂ ವಿಶಿಷ್ಟ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗುತ್ತಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರೈತರು ಮತ್ತು ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು.
ಮುನೇಗೌಡ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ