ಜಿಲ್ಲೆ

ಬದಲಿ ರಸ್ತೆಗೆ ಗ್ರಾಮಸ್ಥರ ಪಟ್ಟುಪಟ್ಟಣ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಪ್ರತಿಭಟನೆ

ಗಂಗಾಧರ ಬಿ ವಿ

ಹಾರೋಹಳ್ಳಿ (ರಾಮನಗರ)

ಪಟ್ಟಣ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೈಪಾಸ್ ರಸ್ತೆಯಲ್ಲಿ ಅಕ್ಕ ಪಕ್ಕದ ಗ್ರಾಮಗಳಿಗೆ ಹೋಗಲು ರಸ್ತೆ ಬಿಡದಿರುವುದಕ್ಕೆ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಮೂಡೇನಹಳ್ಳಿ, ಆದಿಶಕ್ತಿ ದೇವಸ್ಥಾನ, ಸಂಜೀವನಾಯಕನ ದೊಡ್ಡಿ, ಕೊಂಡೇಗೌಡನದೊಡ್ಡಿ, ಮುತ್ತೇಗೌಡನದೊಡ್ಡಿ ಸೇರಿ ಹಲವು ಗ್ರಾಮಗಳಿಗೆ ರಸ್ತೆ ಬಿಡದೆ ಕೆಲಸ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸಂಜೀವನ್‌ದೊಡ್ಡಿ, ಮುಡೇನಹಳ್ಳಿ ಮಾರ್ಗವಾಗಿ ಕೊಂಡೆಗೌಡನದೊಡ್ಡಿ ಸೇರಿ ಮುತ್ತಗೌಡನ ದೊಡ್ಡಿವರೆಗೂ ನಕಾಶೆ ರಸ್ತೆ ಇದ್ದು, ಹತ್ತಾರು ವರ್ಷಗಳಿಂದ ಜನ ಓಡಾಡುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಹಾಗೂ ಜಾನುವಾರುಗಳು ಹೊಲಗಳಿಗೆ ಹೋಗಲು, ಗ್ರಾಮಗಳನ್ನು ಸಂಪರ್ಕಿಸಲು ಇಲ್ಲಿ ರಸ್ತೆ ಇದೆ. 209 ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಗಾಗಿ ನಕಾಶೆ ರಸ್ತೆ ಮುಚ್ಚಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ.

ಮೊದಲೇ ಇಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ರಸ್ತೆ ಇದ್ದು, ಅಧಿಕಾರಿಗಳು ಅದನ್ನು ಮುಚ್ಚಿ ಹಾಕಿದ್ದಾರೆ. ಇದರಿಂದ ಈ ಗ್ರಾಮಗಳಿಗೆ ಓಡಾಡಲು ಸಂಪರ್ಕ ರಸ್ತೆ ಇಲ್ಲದಂತಾಗಿದೆ. ನಮಗೆ ಓಡಾಡಲು ಅಂಡರ್‌ಪಾಸ್ ನಿರ್ಮಿಸಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಮಾತನಾಡಿ, ಈಗಾಗಲೇ ಇಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಆದೇಶ ಬಂದಿದ್ದು, ಯಾವುದೇ ಬೇರೆ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ನೀಡಿದರೆ, ಪರಿಶೀಲನೆ ನಡೆಸಬಹುದು ಎಂದು ತಿಳಿಸಿದ್ದಾರೆ.

ಪ್ರತಿಭಟನೆಯ ನಂತರ ಗ್ರಾಮಸ್ಥರು ರಾಮನಗರದ ಬಸವನಪುರದ ಸಮೀಪ ಇರುವ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ತೆರಳಿ ಬದಲಿ ರಸ್ತೆ ಮತ್ತು ಅಂಡರ್‌ಪಾಸ್ ನಿರ್ಮಿಸುವಂತೆ ಮನವಿ ಸಲ್ಲಿಸಿದರು.

ತಲತಲಾಂತರಗಳಿಂದ ಈ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದು, ನಕಾಶೆ ರಸ್ತೆಯಲ್ಲಿಯೇ ಹೋಗುತ್ತಿದ್ದೆವು. ಆದರೆ ಬೈಪಾಸ್ ರಸ್ತೆ ನೆಪದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೊಂದರೆ ನೀಡುತ್ತಿರುವುದು ಸರಿಯಲ್ಲ. ನಮಗೆ ಅಂಡರ್ ಪಾಸ್ ನಿರ್ಮಿಸಿ ಕೊಡಿ.

ಲಕ್ಷ್ಮೀನಾರಾಯಣ್, ಗ್ರಾಮಸ್ಥ