ಜಿಲ್ಲೆ

ಪಟ್ಟಣ ಪಂಚಾಯಿತಿ ಮಳಿಗೆಗಳ ಹರಾಜಿಗೆ ಹೋರಾಟ ವಿವಿಧ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ

ಗಂಗಾಧರ ಬಿ ವಿ

ಹಾರೋಹಳ್ಳಿ

ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ತಾಲೂಕು ಆಡಳಿತ ಆದಾಯದ ಮೂಲವಾಗಿರುವ ಮಳಿಗೆಗಳನ್ನು ಹರಾಜು ಮಾಡದೇ ಉಳ್ಳವರ ಹಿತ ಕಾಯಲು ನಿಂತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಪದಾಧಿಕಾರಿಗಳು  ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ಕುಳಿತ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು ಮಾಡುವಂತೆ ಬಿಗಿಪಟ್ಟು ಹಿಡಿದಿದ್ದು, ಹರಾಜು ನಡೆಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.

ಯಾರ ಒತ್ತಡಕ್ಕೆ ಮಣಿದಿದ್ದೀರಿ?

ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಗೋವಿಂದಯ್ಯ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ಆದಾಯ ತಂದು ಕೊಡುವ ಮಳಿಗೆಗಳನ್ನು ಹರಾಜು ನಡೆಸದೆ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ. ಪಾಳೆಗಾರಿಕೆ ಸಂಸ್ಕೃತಿ ಕೊನೆಗೊಳ್ಳಬೇಕು. ಮಳಿಗೆಗಳ ಹರಾಜಿಗೆ ಹೈಕೋರ್ಟ್ ತಡೆ ನೀಡಿದೆ ಎಂದು ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶ ಬಹಿರಂಗಪಡಿಸಬೇಕು ಹಾಗೂ ಕೆಲವರ ಹಿತ ಕಾಯುವ ಕೆಲಸವನ್ನು ತಾಲೂಕು ಆಡಳಿತ ಬಿಟ್ಟು ಮಳಿಗೆ ಹರಾಜು ಮಾಡಿ ಆದಾಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ತಪ್ಪಿಸುವ ಹುನ್ನಾರ

ಜಿಲ್ಲಾಡಳಿತವೇ ಹರಾಜು ನಡೆಸುವಂತೆ ಆದೇಶ ನೀಡಿದೆ. ಹೀಗಿರುವಾಗ ಇಲ್ಲಿನ ತಹಸೀಲ್ದಾರ್ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಲಿತರ ಮೀಸಲಾತಿ ತಪ್ಪಿಸುವ ಹುನ್ನಾರ ನಡೆಸುತ್ತಿವೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಗೋವಿಂದಯ್ಯ ಎಚ್ಚರಿಸಿದರು.

ಹರಾಜು ನಿಲ್ಲಿಸುವಲ್ಲಿ ಕೆಲವರು ಯಶಸ್ವಿ

ಆ.23ರಂದು 94 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಜಿಲ್ಲಾಡಳಿತ ತಿಳಿಸಿತ್ತು. ಅದರಂತೆ ಸಿದ್ಧತೆಯೂ ನಡೆದಿತ್ತು. ಆದರೆ, ಕೆಲವರು ಹರಾಜು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 30 ವರ್ಷಗಳ ಹಿಂದೆ ಮಳಿಗೆಗಳನ್ನು ಪಡೆದುಕೊಂಡವರೇ 500, 1000 ರೂ. ಬಾಡಿಗೆ ನೀಡಿ ಪಟ್ಟಣ ಪಂಚಾಯಿತಿಗೆ ವಂಚಿಸುತ್ತಿದ್ದಾರೆ. ಈ ವಿಷಯ ತಿಳಿದಿದ್ದರೂ ತಾಲೂಕು ಆಡಳಿತ ಜಾಣಕುರುಡು ಪ್ರದರ್ಶಿಸುತ್ತಿದೆ. ಈಗಾಗಲೇ ಡಿಡಿ ರೂಪದಲ್ಲಿ 3 ಕೋಟಿ ರೂ. ಸಂಗ್ರಹವಾಗಿತ್ತು.

ಮಳಿಗೆಗಳ ಹರಾಜು ನಡೆದಿದ್ದರೆ ಪಟ್ಟಣ ಪಂಚಾಯಿತಿಗೆ ಕೋಟ್ಯಂತರ ರೂ. ಆದಾಯ ಹರಿದುಬರುತ್ತಿತ್ತು. ಆದರೆ ತಾಲೂಕು ಆಡಳಿತ ಹರಾಜು ನಡೆಸಿಲ್ಲ. ಹರಾಜು ಪ್ರಕ್ರಿಯೆ ನಡೆಸುವವರೆಗೂ ಜಾಗಬಿಟ್ಟು ತೆರಳುವುದಿಲ್ಲ. ಹೈಕೋರ್ಟ್ ಆದೇಶವಿದ್ದರೆ ತಲೆಬಾಗುತ್ತೇವೆ. ಅದನ್ನು ಬಿಟ್ಟು ದಾರಿತಪ್ಪಿಸುವ ಕೆಲಸ ಮಾಡಬಾರದು. ಸಂಬಂಧಪಟ್ಟವರು ಮಧ್ಯ ಪ್ರವೇಶಿಸಿ ಮಳಿಗೆಗಳ ಹರಾಜು ನಡೆಸಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಹಾರೋಹಳ್ಳಿ ಚಂದ್ರು, ಗಿರೇನಹಳ್ಳಿ ಶಿವಕುಮಾರ್, ಶಿಲ್ಪಾ ಶಿವಾನಂದ್, ಕೋಟೆ ಪ್ರಕಾಶ್, ಅಡೆ ಬೀದಿ ನಂದಕುಮಾರ್, ನಾರಾಯಣಸ್ವಾಮಿ, ಮುನಿನಗರ ಶಿವಾನಂದ, ಬೆಟ್ಟಳ್ಳಿ ಕಾವಲ್ ಮುದ್ದುಕೃಷ್ಣ ಮುನಿನಗರ ಶಂಕರ್ ಕೋಟೆ ಕಾರ್ಪೆಂಟರ್ ರಾಜು, ರವೀಂದ್ರ, ತಾಪಂ ಮಾಜಿ ಸದಸ್ಯ ಪುರುಷೋತ್ತಮ್, ಹರೀಶ್, ಮರಳವಾಡಿ ಮಂಜು, ವಾಲೆ ವೆಂಕಟೇಶ್, ಅಂಜನ್ ಮೂರ್ತಿ, ಬೆಣಚುಕಲ್ ದೊಡ್ಡಿ ರುದ್ರೇಶ್, ಭೈರಾಜು, ಬಾಬು, ಶಂಭುಲಿಂಗಯ್ಯ, ವೆಂಕಟೇಶ್, ಕೆಆರ್‌ಎಸ್ ಪಕ್ಷದ ಪ್ರಶಾಂತ್, ಕಿರಣ್, ನಾಗರಾಜು, ಮೇಡಮಾರನಹಳ್ಳಿ ಸುರೇಶ್, ನವೀನ್ ಕುಮಾರ್, ಶಂಕರ್, ನಾರಾಯಣಸ್ವಾಮಿ, ಬಾಲಕೃಷ್ಣ, ನಂದಕುಮಾರ್, ರವೀಂದ್ರ, ಶ್ಯಾಮ್ಸುಂದರ್, ಕೆಬ್ಬೆದೊಡ್ಡಿ ಗೋವಿಂದು ಮುಂತಾದವರು ಹಾಜರಿದ್ದರು.

ಆ ಪೈಕಿ 94 ಮಳಿಗೆ ಸೇರಿ 135 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಆ.25ರೊಳಗೆ ನಡೆಸುವಂತೆ ಹೈಕೋರ್ಟ್ ತಿಳಿಸಿತ್ತು. ಹರಾಜು ಪ್ರಕ್ರಿಯೆ ಸಂಬಂಧ ಆ.23ರಂದು ಹೈಕೋರ್ಟ್ ಆದೇಶ ನೀಡಿದ್ದು, 2 ದಿನದಲ್ಲಿ ಆದೇಶ ಪ್ರತಿ ಕೈಸೇರಲಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು.

ವಿಜಿಯಣ್ಣ, ತಹಸೀಲ್ದಾರ್ ಹಾರೋಹಳ್ಳಿ ಮತ್ತು ಪಪಂ ಆಡಳಿತಾಧಿಕಾರಿ

ಜಿಲ್ಲಾಧಿಕಾರಿಗಳು ಅಂಗಡಿಗಳ ಹರಾಜು ನಡೆಸುವಂತೆ ಆದೇಶ ನೀಡಿರುತ್ತಾರೆ. ಅದರಂತೆ ಪಪಂ ವತಿಯಿಂದ ಹರಾಜು ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಾಲಿ ಅಂಗಡಿ ಮಳಿಗೆದಾರರು ಹೈಕೋರ್ಟ್‌ನಲ್ಲಿ ತಡೆ ನೀಡುವಂತೆ ಕೋರಿದ್ದರು. ಆದರೆ, ಹೈಕೋರ್ಟ್ ಹರಾಜು ಪ್ರಕ್ರಿಯೆ ನಡೆಸಲೇಬೇಕು ಎಂದು ಹೇಳಿದೆ. ಆದರೆ, ಆದೇಶ ಪ್ರತಿ ಕೈಸೇರುವವರೆಗೂ ಮಳಿಗೆಗಳ ಹರಾಜು ನಡೆಸುವುದಿಲ್ಲ. ನಂತರ ಆದೇಶದಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಪಾಲಿಸಿ ಹರಾಜು ನಡೆಸಲಾಗುವುದು.

ನಟರಾಜು, ಪಪಂ ಮುಖ್ಯಾಧಿಕಾರಿ, ಹಾರೋಹಳ್ಳಿ