ಜಿಲ್ಲೆ

ಜೈವಿಕ ಪದ್ಧತಿಯಿಂದ ಕೀಟಬಾಧೆ ನಿಯಂತ್ರಣ ಕೀರಣಗೆರೆ ಜಗದೀಶ್​ ಸಲಹೆ

ಗಂಗಾಧರ ಬಿ ವಿ

ಹಾರೋಹಳ್ಳಿ (ರಾಮನಗರ)

ಸಾವಯವ ಮತ್ತು ಜೈವಿಕ ಪದ್ಧತಿ ಅಳವಡಿಸಿಕೊಂಡರೆ ರೇಷ್ಮೆ ಬೆಳೆಯನ್ನು ಕಾಡುತ್ತಿರುವ ಕೀಟಬಾಧೆ ನಿಯಂತ್ರಿಸಬಹುದು ಎಂದು ಕೀರಣಗೆರೆ ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕ ಜಗದೀಶ್​ ತಿಳಿಸಿದರು.

ಮರಳವಾಡಿ ಹೋಬಳಿಯ ಕೀರಣಗೆರೆ ಚಾಕಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್​ ಮತ್ತು ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹಿಪ್ಪುನೇರಳೆ ನುಸಿ ಮತ್ತು ಹೇನು ನಿಯಂತ್ರಿಸುವ ಜಿಲ್ಲಾಮಟ್ಟದ ಪ್ರಾತ್ಯಕೆ ಉದ್ಘಾಟಿಸಿ ಮಾತನಾಡಿದರು.

ಕೀಟಬಾಧೆಯಿಂದ ರೈತರು ಹಿಪ್ಪು ನೇರಳೆ ಬೆಳೆಯುವುದು ಕಷ್ಟವಾಗುತ್ತಿದೆ. ಒಂದೊಂದು ಋತುವಿನಲ್ಲಿ ಒಂದೊಂದು ಕೀಟಗಳು ಬಾಧಿಸುತ್ತಿವೆ. ನುಸಿ ಮತ್ತು ಸುರಳಿ ಪೌಚ್​ ಕೀಟ ಬಾಧೆ ಹೆಚ್ಚಾಗುತ್ತಿದೆ. ರೈತರು ಸಮಗ್ರ ಕೀಟ ನಿವಾರಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ವಿಷಯುಕ್ತ ಕೀಟ ನಿವಾರಕ ಬಳಸುವುದರಿಂದ ತೋಟ ಮತ್ತು ರೈತರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಜೈವಿಕ ಮತ್ತು ಸಾವಯವ ರೀತಿಯಲ್ಲಿ ಕೀಟಬಾಧೆ ನಿಯಂತ್ರಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಗ್ರೀನ್​ ಪ್ಲಾಂಟ್​ ಎಂಬ ಸಂಸ್ಥೆ ಆರ್ಗ್ಯಾನಿಕ್​ ಅಥವಾ ಸಾವಯವ ರೀತಿಯಲ್ಲಿ ರೇಷ್ಮೆ ತೋಟಗಳಿಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಬೇವಿನ ಎಣ್ಣೆ ಬಳಸಿದ ಔಷಧಗಳು ಸಮುದ್ರದಲ್ಲಿ ಸಿಗುವ ಕಳೆ ಮತ್ತು ಜೊಂಡಿನಿಂದ ಕೆಲವು ಔಷಧಗಳನ್ನು ಅಭಿವೃದ್ಧಿಪಡಿಸಿದೆ. ಈ ಔಷಧಗಳನ್ನು ರೇಷ್ಮೆ ತೋಟಕ್ಕೆ ಸಿಂಪಡಿಸುವುದರಿಂದ ನುಸಿ ಕೀಟ ಬಾಧೆ ನಿಯಂತ್ರಿಸಿ, ಹಿಪ್ಪು ನೇರಳೆ ಸೊಪ್ಪಿನಲ್ಲೂ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಇದರಿಂದ ರೈತರಿಗೆ ಶೇ.50 ಆದಾಯ ಹೆಚ್ಚಲಿದೆ ಎಂದರು.

ಕೀಟನಾಶಕ ಬಳಕೆಗೆ ಕಡಿವಾಣ ಅಗತ್ಯ

ಮೈಸೂರು ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಯ ವಿಾನಿ ಡಾ.ಎಸ್​.ಮಹಿಮಾ ಹಿಲನ್​ ಮಾತನಾಡಿ, ಕೀಟನಾಶಕಗಳ ಬಳಕೆಗೆ ಕಡಿವಾಣ ಹಾಕಬೇಕು. ರೇಷ್ಮೆ ಕೃಷಿಯಲ್ಲಿ ಸುಧಾರಣೆ ತರಬೇಕು ಎಂಬ ದೃಷ್ಟಿಯಿಂದ ಪರತಂತ್ರ ನುಸಿ ಉತ್ಪಾದನೆ ಮಾಡಿದ್ದೇವೆ. ರೈತರಿಗೆ ಹೆಚ್ಚು ಖರ್ಚಿಲ್ಲದೆ ಜೈವಿಕ ಪದ್ಧತಿಯಲ್ಲಿ ಕೀಟಗಳನ್ನು ನಿಯಂತ್ರಿಸಬಹುದು.

ರೇಷ್ಮೆಯನ್ನು ಬಾಧಿಸುತ್ತಿರುವ ನುಸಿ ಕೀಟಗಳನ್ನು ಪರತಂತ್ರ ನುಸಿ ತಿಂದು ಹಾಕಿ ರೇಷ್ಮೆ ತೋಟಗಳಲ್ಲಿ ನುಸಿ ಕೀಟಗಳನ್ನು ನಿಯಂತ್ರಣ ಮಾಡಲಿದೆ. ಅತಿ ಹೆಚ್ಚು ಕೀಟಬಾಧೆ ಇರುವ ರೇಷ್ಮೆ ತೋಟಗಳಲ್ಲಿ ಜೈವಿಕ ಪದ್ಧತಿಯಿಂದ ನಿಯಂತ್ರಣ ಮಾಡುವುದು ಕಷ್ಟ. ಕೀಟಬಾಧೆ ಆರಂಭಿಕ ಹಂತದಲ್ಲಿರುವ ರೇಷ್ಮೆ ತೋಟಗಳಲ್ಲಿ ಜೈವಿಕ ಪದ್ಧತಿ ಅಳವಡಿಸಿಕೊಳ್ಳಬಹುದು. ಆದರೆ, ಯಾವುದೇ ಕ್ರಿಮಿನಾಶಕಗಳನ್ನು ಸಿಂಪಡಿಸಬಾರದು. ಒಂದು ವೇಳೆ ಸಿಂಪಡಿಸಿದರೆ ಪರಪ ನುಸಿ ನಾಶವಾಗುತ್ತದೆ ಎಂದರು.

ಪರತಂತ್ರ ನುಸಿಯಿಂದ ಕೀಟಬಾಧೆ ದೂರ

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜ್​ ಮಾತನಾಡಿ, ಪರತಂತ್ರ ಜೀವಿಗಳನ್ನು ಉತ್ಪಾದಿಸುವ ಅಗತ್ಯ ಇರಲಿಲ್ಲ. ಅಂತಹ ಸಂದರ್ಭವನ್ನು ನಾವೇ ಸೃಷ್ಟಿ ಮಾಡಿದ್ದೇವೆ. ನಾಲ್ಕು ದಶಕಗಳ ಹಿಂದೆ ಹಿಪ್ಪುನೇರಳೆ ತಿನ್ನುವ ಕೀಟಗಳನ್ನು ಮತ್ತೊಂದು ಕೀಟಗಳು ತಿಂದು ಕೀಟಬಾಧೆ ಪ್ರಕೃತಿದತ್ತವಾಗಿ ನಿಯಂತ್ರಣಕ್ಕೆ ಬರುತ್ತಿತ್ತು ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿದೆ. ಅಲ್ಲದೆ ರೇಷ್ಮೆ ಹುಳುಗಳ ಮೇಲು ಪರಿಣಾಮ ಬೀರುತ್ತದೆ.

ಪರತಂತ್ರ ನುಸಿಗಳನ್ನು ರೇಷ್ಮೆ ತೋಟಗಳಲ್ಲಿ ಬಿಟ್ಟರೆ ಅವು ಕೀಟಗಳನ್ನು ತಿಂದು ಹಾಕಿ, ಕೀಟ ಬಾಧೆ ನಿಯಂತ್ರಣಕ್ಕೆ ಬರುತ್ತದೆ. ಜೈವಿಕ ಪದ್ಧತಿಯನ್ನು ಅಳವಡಿಸಿಕೊಂಡು ರೇಷ್ಮೆ ಕೃಷಿ ಮತ್ತು ಆರ್ಥಿಕವಾಗಿ ಸುಧಾರಣೆ ಆಗಬೇಕು ಎಂದರು.

ಬೆಂಗಳೂರಿನ ಹೆಬ್ಬಾಳದ ರಾಷ್ಟ್ರೀಯ ಕೃಷಿ ಸಮಗ್ರ ಕೀಟ ಸಂಶೋಧನಾ ಸಂಸ್ಥೆ ವಿಾನಿ ರಾಮಕುಮಾರ್​, ಜಿಲ್ಲಾ ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಸವರಾಜು, ವಿವಿಧ ತಾಲೂಕುಗಳ ರೇಷ್ಮೆ ಸಹಾಯಕ ನಿರ್ದೇಶಕರಾದ ಭೀಮಣ್ಣ, ಉಮೇಶ್​, ರೇಷ್ಮೆ ಇಲಾಖೆ ಸಿಬ್ಬಂದಿ, ಗ್ರೀನ್​ಪ್ಲಾಂಟ್​ ಸಂಸ್ಥೆಯ ಶ್ರೀಕಾಂತ್​, ಪ್ರಗತಿಪರ ರೈತರು ಉಪಸ್ಥಿತರಿದ್ದರು.