ಜಿಲ್ಲೆ

ಗ್ರಾಮ ಒನ್​, ಬಾಪೂಜಿ ಕೇಂದ್ರಗಳಿಗೆ ದಿಢೀರ್​ ಭೇಟಿ ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ ದೂರಿನ ಹಿನ್ನೆಲೆ ಸಿಬ್ಬಂದಿಗೆ ಶಿಸ್ತುಕ್ರಮದ ಎಚ್ಚರಿಕೆ

ಕೈಲಾಂಚ

ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಹೆಸರು ನೋಂದಣಿಗೆ ಮಹಿಳೆಯರಿಂದ ಹಣ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಮನಗರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಪ್ರದಿಪ್​ ಅವರು ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಗ್ರಾಮ ಒನ್​ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಸೋಮವಾರ ದಿಢೀರ್​ ಭೇಟಿ ನೀಡಿ ಪರಿಶೀಲಿಸಿದರು.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಉಚಿತ ಎಂದು ಸರ್ಕಾರ ಘೋಷಿಸಿದೆ. ಆದರೆ, ಗ್ರಾಮ ಒನ್​ ಮತ್ತು ಬಾಪೂಜಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಮಹಿಳೆಯರಿಂದ ಹಣ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಬಗ್ಗೆ ವಿಜಯವಾಣಿ ಪತ್ರಿಕೆ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಸಾರ್ವಜನಿಕರಿಂದಲೂ ದೂರು ಸಲ್ಲಿಕೆಯಾಗಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ತಾಪಂ ಇಒ ಪ್ರದಿಪ್​ ಅವರು ಸೋಮವಾರ ವಿಭೂತಿಕೆರೆ, ಬನ್ನಿಕುಪ್ಪೆ, ಕೈಲಾಂಚ, ಹುಲಿಕೆರೆ&ಗುನ್ನೂರು ಅವ್ವೇರಹಳ್ಳಿ ಗ್ರಾಮ ಪಂಚಾಯಿತಿಗಳ ಗ್ರಾಮ ಒನ್​, ಬಾಪೂಜಿ ಸೇವಾ ಕೇಂದ್ರಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೃಹಲ್ಮ ಯೋಜನೆಗೆ ಹೆಸರು ನೋಂದಣಿ ಮಾಡಿಕೊಳ್ಳುವುದು ಉಚಿತವಾಗಿದ್ದು, ಯಾವುದೇ ಹಣ ನೀಡುವಂತಿಲ್ಲ. ಒಂದು ವೇಳೆ ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟರೆ ಕೂಡಲೇ ದೂರವಾಣಿ ಕರೆ ಮಾಡಿ ತಿಳಿಸಿದರೆ ಅಂತಹ ಕೇಂದ್ರಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ. ಯಾರು ಕೂಡ ನೋಂದಣಿಗೆ ಹಣ ನೀಡದಂತೆ ತಿಳಿಸಿದ ಪ್ರದಿಪ್​, ಯಾರಿಂದಲೂ ಹಣ ಪಡೆಯಬೇಡಿ. ಸಾರ್ವಜನಿಕರಿಂದ ದೂರು ಬಂದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಅವ್ವೇರಹಳ್ಳಿ ಗ್ರಾಮ ಒನ್​ ಕೇಂದ್ರದಲ್ಲಿ ನೋಂದಣಿಗೆ 100 ರೂ. ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮಹಿಳೆಯೊಬ್ಬರು 100 ರೂ. ನೀಡುತ್ತಿದ್ದುದು ಗಮನಕ್ಕೆ ಬಂತು. ಈ ಬಗ್ಗೆ ಪ್ರಶ್ನಿಸಿದಾಗ ಆತ ಸಮಂಜಸ ಉತ್ತರ ನೀಡಲಿಲ್ಲ. ಸ್ಪಷ್ಟೀಕರಣ ಕೂಡ ನೀಡಲಿಲ್ಲ. ಮೇಲ್ನೋಟಕ್ಕೆ ಹಣ ಪಡೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆತನ ಪ್ರಾಂಚೈಸಿ ರದ್ದುಗೊಳಿಸಲು ಜಿಲ್ಲಾಧಿಕಾರಿ, ತಹಸೀಲ್ದಾರ್​ ಅವರಿಗೆ ಪತ್ರ ಬರೆಯಲಾಗುವುದು.

 ಟಿ. ಪ್ರದಿಪ್​, ಇಒ ತಾಪಂ ರಾಮನಗರ