ರಾಮನಗರ: ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇದ್ದರೆ, ಎಸ್‌ಎಸ್ ಎಲ್‌ಸಿ, ಪಿಯುಸಿ ಪರೀಕ್ಷೆ ಹಾಗೂ ಚುನಾವಣೆಯನ್ನು ಬಹಿಷ್ಕರಿಸಲು ಹಿಂಜರಿಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಹೇಳಿದರು.
ನಗರದ ಸ್ಪೂರ್ತಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದು ಚುನಾವಣೆ ಘೋಷಣೆಗೂ ಮುನ್ನವೇ ಶೇ.40ರಷ್ಟು ಫಿಟ್‌ಮೆಂಟ್ ಸೌಲಭ್ಯ ನೀಡಬೇಕು, ರಾಜ್ಯದ ಎನ್‌ಪಿಎಸ್ ನೌಕರರ ಭವಿಷ್ಯದ ದೃಷ್ಠಿಯಿಂದ ಇದನ್ನು ರದ್ದುಗೊಳಿಸಿ, ಓಪಿಎಸ್ ವ್ಯಾಪ್ತಿಗೆ ತರಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಇಟ್ಟು ಇದಕ್ಕಾಗಿ ಒಂದು ವಾರದ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ.
ಇಷ್ಟರೊಳಗೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸುತ್ತದೆ ಎನ್ನುವ ವಿಶ್ವಾಸವಿದೆ, ಇಲ್ಲವಾದರೆ ಮಾ.1ರಿಂದ ಅನಿರ್ಧಿಷ್ಠಾವಧಿ ಮುಷ್ಕರವನ್ನು ಕರ್ತವ್ಯಕ್ಕೆ ಗೈರು ಹಾಜಾರುವ ಮೂಲಕ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು. ಈ ಹೋರಾಟದಲ್ಲಿ ಜಿಲ್ಲೆಯ 12 ಸಾವಿರ ಸರ್ಕಾರಿ ನೌಕರರು, ಬೆಸ್ಕಾಂ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸೇರಿದಂತೆ ಇತರೆ ಇಲಾಖೆಗಳ ಸುಮಾರು 5 ಸಾವಿರ ಸಿಬ್ಬಂದಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಸರ್ಕಾರಿ ಈ ಬಾರಿ 3.09 ಲಕ್ಷ ಕೋಟಿ ರೂ ಮೌಲ್ಯದ ಬಜೆಟ್ ಮಂಡನೆ ಮಾಡಿದೆ. ಈ ಬಾರಿ 7ನೇ ವೇತನ ಆಯೋಗದ ವರದಿ ಜಾರಿ ಇದಕ್ಕೆ ಬೇಕಾದ ಅನುಧಾನವನ್ನು ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗಾಗಿ ಮೀಸಲಿಡುತ್ತಾರೆ ಎನ್ನುವ ನಂಬಿಕೆ ಎಲ್ಲರದ್ದಾಗಿತ್ತು. ಆದರೆ ಬಜೆಟ್‌ನಲ್ಲಿ ಸರ್ಕಾರಿ ನೌಕರರ ಬಗ್ಗೆ ಒಂದೇ ಒಂದು ಯೋಜನೆಯನ್ನು ನೀಡದೆ ನಮ್ಮ ಎಲ್ಲಾ ಕನಸು ಮತ್ತು ಕಾಯುವಿಕೆಗೆ ಮುಖ್ಯಮಂತ್ರಿ ತಣ್ಣಿರು ಎರೆಚಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.21ರಂದು ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ರಾಜ್ಯದ ಸುಮಾರು 8 ಸಾವಿರ ಮಂದಿ ಸಂಘಟನೆ ಪದಾಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಹೋರಾಟ ನಿರ್ಧಾರವನ್ನು ಕೈಗೊಂಡಿದ್ದೇವೆ. ಇದಕ್ಕಾಗಿ ಒಂದುವಾರದ ಗಡುವನ್ನೂ ಸಹ ವಿಧಿಸಿದ್ದೇವೆ ಎಂದು ಸತೀಶ್ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರಿಗೆ 2022ರ ಜುಲೈ 1ರಿಂದಲೇ ಪರಿಷ್ಕೃತ ವೇತನ. ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಲ್ಲಿಯೇ 7ನೇ ವೇತನ ಆಯೋಗದಿಂದ ಶೀಘ್ರವೇ ಮಧ್ಯವಂತ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.40ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ಸರ್ಕಾರ ನೀಡಬೇಕು. ನೌಕರರ ಭವಿಷ್ಯದ ಹಿತದೃಷ್ಠಿಯಿಂದ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಕಾಂತರಾಜು, ಸುಬ್ರಹ್ಮಣ್ಯ, ಕೃಷ್ಣ ಪ್ರಸಾದ್, ಪ್ರದೀಪ್, ಭೈರಪ್ಪ, ಟಿ.ಸ್ವಾಮಿ, ಹರ್ಷ, ಡಾ.ರಂಗಪ್ಪ, ಶಿವಸ್ವಾಮಿ, ಯೋಗೇಶ್, ಸುರೇಂದ್ರ, ಚಂದ್ರಹಾಸ್, ಮಹದೇವ್, ರಮೇಶ್, ರಾಜಶೇಖರ್ ಮೂರ್ತಿ, ಅಂಬರೀಷ್‌ಗೌಡ, ರವಿ, ಪಿಡಿಓ ಉಮೇಶ್, ಎಲ್.ಸಿ.ಮಹದೇವಯ್ಯ, ಶ್ರೀನಿವಾಸ್, ವಿಜಯಕುಮಾರ್, ಸಂಜೀವೇಗೌಡ, ರಾಜಶೇಖರ್, ಪುಟ್ಟಸ್ವಾಮಿಗೌಡ ಡಿ., ವೆಂಕಟಾಚಲಯ್ಯ ಮುಂತಾದವರು ಇದ್ದರು.