ಜಿಲ್ಲೆ

ಅಚ್ಚಲು ಬಳಿ ಅರ್ಕಾವತಿಗೆ ರಾಮನಗರ ಕಸ ನದಿ ನೀರು ಕಲುಷಿತ ಪರಿಸರ ಮಾಲಿನ್ಯ

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಒಂದೆಡೆ ನದಿಗಳ ಶುದ್ಧೀಕರಣ ಕಾರ್ಯ ಮುನ್ನೆಲೆಗೆ ಬರುತ್ತಿದ್ದರೆ ಮತ್ತೊಂದೆಡೆ ಇವುಗಳನ್ನು ಕಲುಷಿತಗೊಳಿಸುವ ಕೆಲಸ ಸದ್ದಿಲ್ಲದೆ ಸಾಗಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾಗಿರುವ ಅರ್ಕಾವತಿ ಬಹುತೇಕ ಕಲುಷಿತಗೊಂಡಿದ್ದು, ಇದಕ್ಕೆ ರಾಮನಗರ ನಗರಸಭೆಯ ಪಾಲೂ ಇದೆ.

ನಗರದ ಹೊರವಲಯದ ಅಚ್ಚಲು ಬಳಿ ನಗರದ ಕಸವನ್ನು ನದಿಯ ಪಕ್ಕದಲ್ಲಿಯೇ ಸುರಿದು ಅದಕ್ಕೆ ಬೆಂಕಿ ಹಚ್ಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದ್ದು, ನೀರು ಕಲುಷಿತಗೊಳ್ಳುತ್ತಿರುವ ಜತೆಗೆ ಆ ಭಾಗದ ಪರಿಸರವೂ ಸಂಪೂರ್ಣವಾಗಿ ಮಲಿನಗೊಂಡು ಜನತೆ ತೊಂದರೆಗೆ ಒಳಗಾಗುವಂತೆ ಮಾಡಿದೆ.

ಜಾಗ ಇಲ್ಲ

ರಾಮನಗರ ನಗರಸಭೆ ಕಸ ವಿಲೇವಾರಿಗಾಗಿ ಸೂಕ್ತ ಜಾಗ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಂಪೂರ್ಣ ವಿಫಲವಾಗಿದೆ. ಇದರಿಂಗಾಗಿ ನಗರದ ಕೆಲವು ಕಡೆಗಳಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ತಂತ್ರಜ್ಞಾನದ ಮೂಲಕ ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿರುವುದು ಬಿಟ್ಟರೆ ಒಣ ಕಸಕ್ಕೆ ಪರ್ಯಾಯ ಹುಡುಕಿಕೊಂಡಿಲ್ಲ. ಇದರಿಂದಾಗಿ ಖಾಲಿ ಜಾಗಗಳನ್ನು ಹುಡುಕಿ ಕಸ ತುಂಬಿ ಮಣ್ಣು ಮುಚ್ಚುವ ಕೆಲಸ ನಡೆಯುತ್ತಿದೆ. ಹಿಂದೆಯೂ ರಾಮನಗರದ ಅರ್ಕಾವತಿ ನದಿಗೆ ಹೊಂದಿಕೊಂಡಂತೆ ಮದರ್‌ಸಾಬರ ದೊಡ್ಡಿಯ ಬಳಿ ಕಸ ವಿಲೇವಾರಿ ಮಾಡಲಾಗುತಿತ್ತು. ಈಗ ಮತ್ತೆ ಅಚ್ಚಲು ಸಮೀಪದ ಶಿಡ್ಲಕಲ್ ಸಮೀಪ ಪ್ರತಿದಿನ ಕಸ ಸುರಿದು ಬೆಂಕಿ ಹಚ್ಚಲಾಗುತ್ತಿದೆ.

ನೀರು ಕಲುಷಿತಗೊಳ್ಳುತ್ತಿದೆ

ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 5 ಕಿ.ಮೀ.ವರೆಗೆ ಅರ್ಕಾವತಿ ನದಿ ಹರಿಯುತ್ತದೆ. ಇನ್ನು ಮಂಚನಬೆಲೆಯಿಂದ ಆರಂಭಗೊಂಡು ರಾಮನಗರದವರೆಗೂ ಅಲ್ಲಲ್ಲಿ ವಿವಿಧ ಗ್ರಾಮಗಳ ಕಲುಷಿತ ನೀರು ಸಹ ನದಿಗೆ ಸೇರುತ್ತಿದೆ. ರಾಮನಗರ ನಗರಸಭೆ ವ್ಯಾಪ್ತಿಯ 1ರಿಂದ 10ನೇ ವಾರ್ಡ್ ಜನರಿಗೆ ಕುಡಿಯುವ ನೀರನ್ನು ಅರ್ಕಾವತಿ ನದಿಯಿಂದಲೇ ಪೂರೈಕೆ ಮಾಡಲಾಗುತ್ತದೆ. ಈಗ ನಗರದ ಹೊರ ಭಾಗದಲ್ಲಿ ಮತ್ತಷ್ಟು ಗಲೀಜು ನದಿಗೆ ಸೇರುತ್ತಿರುವ ಕಾರಣ ನೀರು ಹೆಚ್ಚು ಮಲಿನಗೊಳ್ಳುತ್ತಿದೆ. ಇದನ್ನು ತಡೆಯಬೇಕಾದ ಸ್ಥಳೀಯ ಆಡಳಿತಗಳು ಕಣ್ಮುಚ್ಚಿ ಕುಳಿತಿವೆ.

ವಾತಾವರಣ ಕಲುಷಿತ

ಗ್ರಾಮದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಅರ್ಕಾವತಿ ನದಿ ನೀರು ಮಲೀನವಾಗುವುದರ ಜತೆಗೆ ಸುತ್ತಮುತ್ತಲಿನ ವಾತಾವರಣ ಹಾಳಾಗುತ್ತಿದೆ. ಕೆಟ್ಟ ವಾಸನೆಯೊಂದಿಗೆ ನೊಣ ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಿದೆ. ಇನ್ನು ಕಸಕ್ಕೆ ಬೆಂಕಿ ಹಚ್ಚುವುದರಿಂದ ಇಡೀ ವಾತಾವರಣವನ್ನು ಹೊಗೆ ಆವರಿಸಿಕೊಂಡು ಹಾಳು ಮಾಡುತ್ತಿದೆ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗಮನ ಹರಿಸಲಿ

ರಾಮನಗರದ ಕಸವನ್ನು ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ವಿಲೇ ಮಾಡಲಾಗುತ್ತಿದೆ. ಅಚ್ಚಲು ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರ ಹಾಳಾಗಲು ಮತ್ತು ನದಿ ಕಲುಷಿತಗೊಳ್ಳಲು ನಗರಸಭೆ ಕಾರಣ ಎನ್ನುವುದು ಸ್ಥಳೀಯರ ಬೇಸರ. ಈ ಪ್ರದೇಶ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ನಡೆಯುತ್ತಿರುವ ಕಸ ವಿಲೇವಾರಿಗೆ ಗ್ರಾಪಂ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಕಸ ವಿಲೇವಾರಿ ಮಾಡುವವರಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಹೇಳಲಾಗಿದೆ. ಆದರೂ ಇದಕ್ಕೆ ಮಾನ್ಯತೆ ನೀಡದೆ ಕಸ ವಿಲೇವಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಕಸ ವಿಲೇವಾರಿ ತಡೆಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ.

ನದಿ ಪಕ್ಕದಲ್ಲಿಯೇ ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕಸ ವಿಲೇ ಮಾಡದಂತೆ ಮೌಖಿಕವಾಗಿ ಹಲವಾರು ಬಾರಿ ಹೇಳಲಾಗಿದೆ. ಈ ಸಂಬಂಧ ನಗರಸಭೆಗೂ ಪತ್ರ ಮುಖೇನ ಮನವಿ ಮಾಡಲಾಗುವುದು.

ಬಿ.ಪಿ.ಕುಮಾರ್, ಪಿಡಿಒ ಹುಣಸನಹಳ್ಳಿ ಗ್ರಾಪಂ

--

ಕಸವನ್ನು ನದಿಯ ಪಕ್ಕದಲ್ಲಿಯೇ ಡಂಪ್ ಮಾಡಲಾಗುತ್ತಿದೆ. ಇದರಿಂದ ನದಿ ಕಲುಷಿತಗೊಳ್ಳುತ್ತಿದೆ. ಕಸಕ್ಕೆ ಬೆಂಕಿ ಹಚ್ಚುವುದರಿಂದ ಇಡೀ ವಾತಾವರಣ ಹಾಳಾಗಿದೆ. ಸಂಬಂಧಪಟ್ಟವರು ಸಮಸ್ಯೆಯನ್ನು ಸರಿಪಡಿಸಬೇಕಿದೆ.

ಉಮೇಶ್, ಅಚ್ಚಲು