ಜಿಲ್ಲೆ

ಲೋಡ್‌ ಶೆಡ್ಡಿಂಗ್ ಭೂತಕ್ಕೆ ಅನ್ನದಾತ ಕಂಗಾಲು ಸರ್ಕಾರ ಬೆಸ್ಕಾಂ ವಿರುದ್ಧ ಭುಗಿಲೇಳುತ್ತಿದೆ ಆಕ್ರೋಶ

ಗಂಗಾಧರ ಬಿ ವಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಜಿಲ್ಲೆಯ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜಿಲ್ಲೆಯ ರೈತರು ಹೈರಾಣಾಗಿದ್ದು ಅನ್ನದಾತನ ಆಕ್ರೋಶ ತಣ್ಣಗೆ ಭುಗಿಲೇಳುತ್ತಿದೆ.

ಜಿಲ್ಲೆಯ ಬಹುಪಾಲು ರೈತರು ಬೆಳೆಗಳನ್ನು ಬೆಳೆಯಲು ಕೊಳವೆಬಾವಿ ನೀರು ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ವಿದ್ಯುತ್ ವ್ಯತ್ಯಯವಾಗುತ್ತಿರುವುದಕ್ಕೆ ಸರ್ಕಾರ ಹಾಗೂ ಬೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಕೃಷಿ ಪಂಪ್‌ಸೆಟ್‌ಗಳಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಸಬೇಕು ಎಂಬ ನಿಯಮವಿದೆ. ಕೆಲ ವರ್ಷಗಳ ಹಿಂದೆ ಇದೇ ತರಹ ವಿದ್ಯುತ್ ಪೂರೈಸಲಾಗುತಿತ್ತು. ಆದರೆ, ಓವರ್‌ಲೋಡ್ ಸೇರಿ ಇನ್ನಿತರ ಕಾರಣಗಳಿಂದ ಹಗಲಿನಲ್ಲಿ 3 ತಾಸು ಹಾಗೂ ರಾತ್ರಿ ವೇಳೆ 4 ತಾಸು ವಿದ್ಯುತ್ ನೀಡಲಾಗುತ್ತಿದೆ. ಆದರೆ, ಕೆಲ ದಿನಗಳಿಂದ ಈ ರೀತಿಯ ವಿದ್ಯುತ್ ಪೂರೈಕೆಗೂ ಕತ್ತರಿ ಬೀಳುತ್ತಿದೆ. ಕೃಷಿ ಪಂಪ್‌ಸೆಟ್‌ಗೆ ಯಾವ ಸಮಯದಲ್ಲಿ ವಿದ್ಯುತ್ ಪೂರೈಕೆಯಾಗುತ್ತದೆ ಎಂಬುದೇ ಖಾತರಿ ಇಲ್ಲದಂತಾಗಿದೆ. ಇದರಿಂದಾಗಿ ರೈತರು ಜಮೀನುಗಳಿಗೆ ನೀರುಣಿಸಲು ವಿದ್ಯುತ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ವಿದ್ಯುತ್ ಉತ್ಪಾದನೆ ಕುಂಠಿತ ಎಫೆಕ್ಟ್!

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಮೂರು ತಾಸು ಹಾಗೂ ರಾತ್ರಿ ನಾಲ್ಕು ತಾಸು ಪೂರೈಸುವ ವಿದ್ಯುತ್‌ನಲ್ಲಿ ಬೇಕಾಬಿಟ್ಟಿ ಕಡಿತವಾಗುತ್ತಿದೆ. ಇದರೊಂದಿಗೆ, ರಾತ್ರಿ ವೇಳೆ ನೀಡುವ ಸಿಂಗಲ್ೇಸ್ ವಿದ್ಯುತ್ ಸಹ ಇಲ್ಲದಂತಾಗುತ್ತಿದೆ. ಲೋಡ್‌ಶೆಡ್ಡಿಂಗ್ ಎಂಬ ಭೂತಕ್ಕೆ ಅನ್ನದಾತ ಕಂಗಾಲಾಗುವಂತಾಗಿದೆ. ಇದಕ್ಕೆಲ್ಲ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿರುವುದು ಕಾರಣ ಎನ್ನಲಾಗುತ್ತಿದೆ. ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿನ ಸಮಸ್ಯೆ ಸೇರಿ ಹಲವಾರು ಕಾರಣಗಳಿಂದ ಇಡೀ ರಾಜ್ಯದ ಕೃಷಿ ವಿದ್ಯುತ್ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗುತ್ತಿದೆ. ಈ ಬಿಸಿ ರಾಮನಗರ ಜಿಲ್ಲೆಗೂ ತಟ್ಟಿದೆ. ವಿದ್ಯುತ್ ಪೂರೈಕೆಯಲ್ಲಿ ವಿಫಲವಾಗುತ್ತಿರುವ ಸರ್ಕಾರ ಹಾಗೂ ಕೆಪಿಟಿಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

ಚನ್ನಪಟ್ಟಣದಲ್ಲಿ ಹೆಚ್ಚು

ಕೃಷಿ ವಿದ್ಯುತ್ ಪೂರೈಕೆ ಸಮಸ್ಯೆ ಚನ್ನಪಟ್ಟಣದಲ್ಲಿ ತುಸು ಹೆಚ್ಚಾಗಿದೆ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಚನ್ನಪಟ್ಟಣ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ಪಂಪ್‌ಸೆಟ್‌ಗಳು ಇಲ್ಲಿವೆ. ಈ ಕಾರಣದಿಂದ ಸಹಜವಾಗಿ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರೊಂದಿಗೆ ತಾಲೂಕಿನಲ್ಲಿ ಪವರ್ ಸ್ಟೇಷನ್‌ಗಳ ಕೊರತೆ ಇರುವ ಕಾರಣ ಓವರ್‌ಲೋಡ್ ಸಮಸ್ಯೆಯೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕೃಷಿ ವಿದ್ಯುತ್ ಪೂರೈಕೆಯಲ್ಲಿ ಲೋಪದೋಷಗಳು ಕಂಡು ಬರುತ್ತಿವೆ. ಕಳೆದ ಒಂದು ವಾರದಲ್ಲಿ ವಿದ್ಯುತ್ ಕೊರತೆ ಕುರಿತಂತೆ ಎರಡು ಪ್ರತಿಭಟನೆಗಳು ನಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ.

ಹೆಚ್ಚುತ್ತಿದೆ ಅನ್ನದಾತನ ಅಸಮಾಧಾನ!

ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ರಾತ್ರಿ ಸಮಯದಲ್ಲಿ ಸಿಂಗಲ್ೇಸ್ ವಿದ್ಯುತ್ ಸ್ಥಗಿತಗೊಳಿಸುತ್ತಿರುವ ಬಗ್ಗೆ ಚನ್ನಪಟ್ಟಣದಲ್ಲಿ ಅನ್ನದಾತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲದಿನಗಳ ಹಿಂದೆ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ, ತಾಲೂಕಿನ ಗಡಿಭಾಗ ಇಗ್ಗಲೂರು ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಇದೀಗ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಾಲೆತೋಪು ಗ್ರಾಮದ ವಿದ್ಯುತ್ ಶಾಖಾ ಕಚೇರಿಯ ಎದುರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ್ದು, ತಾಲೂಕಿನ ರೈತರ ಆಕ್ರೋಶಕ್ಕೆ ಉದಾಹರಣೆಯಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ, ಈ ಬಗ್ಗೆ ಚಕಾರ ಎತ್ತದ ಕ್ಷೇತ್ರದ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ವಿರುದ್ದವೂ ಅಸಮಾಧಾನ ಹೊಗೆಯಾಡುತ್ತಿದೆ. ರೈತರ ಆಕ್ರೋಶ ಭುಗಿಲೇಳುವ ಮುನ್ನ ಸಮಸ್ಯೆ ಬಗೆಹರಿಸಲು ಸಂಬಂಧಿಸಿದವರು ಮುಂದಾಗುವುದು ಒಳ್ಳೆಯದು.