ಜಿಲ್ಲೆಯಲ್ಲಿ ಇನ್ನೂ ಇವೆ ಆನೆಗಳು ಕಾರ್ಯಾಚರಣೆ ನಿರಂತರ18 ಆನೆಗಳನ್ನು ಗಡಿಯಾಚೆ ಅಟ್ಟಿದ ಅರಣ್ಯ ಇಲಾಖೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕೆಲವು ದಿನಗಳಿಂದ ನಡೆಯುತ್ತಿರುವ ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಬರೋಬ್ಬರಿ 18 ಆನೆಗಳನ್ನು ಜಿಲ್ಲೆಯ ಗಡಿಯಿಂದ ಓಡಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಆನೆಗಳ ಉಪಟಳ ಮಿತಿಮೀರಿದ್ದು, ಕಳೆದ ತಿಂಗಳು 20 ದಿನಗಳ ಅಂತರದಲ್ಲಿ ಮೂವರನ್ನು ಆನೆ ಬಲಿ ತೆಗೆದುಕೊಂಡಿತ್ತು. ಇದರಿಂದಾಗಿ ರೈತರು ಮತ್ತು ಸಾರ್ವಜನಿಕರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸ್ವಸ್ಥಾನಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದು, ಇದುವರೆಗೆ 18 ಆನೆಗಳನ್ನು ಜಿಲ್ಲೆಯ ಗಡಿ ದಾಟಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಇನ್ನೂ ಇವೆ ಆನೆಗಳು
ರಾಮನಗರದ ಹಂದಿಗುಂದಿ, ತೆಂಗಿನಕಲ್ಲು, ನರೀಕಲ್ಲು ಗುಡ್ಡ, ಚಿಕ್ಕಮಣ್ಣುಗುಡ್ಡೆ , ಕಬ್ಬಾಳು ಅರಣ್ಯ, ಅಚ್ಚಲು ಅರಣ್ಯ ಪ್ರದೇಶಗಳಲ್ಲಿ ಆನೆಗಳು ಬೀಡು ಬಿಟ್ಟಿವೆ. ಇತ್ತೀಚೆಗೆ ಮಾನವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸಾಮಾನ್ಯ ಎನ್ನುವಂತೆ ಆಗಿತ್ತು. ಮೊದಲಿಗೆ ಎರಡು ಆನೆಗಳನ್ನು ಕಾರ್ಯಾಚರಣೆ ಮೂಲಕ ಹಿಡಿಯಲಾಗಿತ್ತು. ನಂತರ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಅಲ್ಪಮಟ್ಟದ ಯಶಸ್ಸನ್ನು ಕಂಡಿದೆ. ಆದರೂ ಇನ್ನೂ 10 ಆನೆಗಳು ಜಿಲ್ಲಾ ವ್ಯಾಪ್ತಿಯಲ್ಲಿಯೇ ಇವೆ. ಇವುಗಳನ್ನು ಓಡಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇದೆ.
300ಕ್ಕೂ ಹೆಚ್ಚು ಸಿಬ್ಬಂದಿ
ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಎಲಿಫೆಂಟ್ ಟಾಸ್ಕ್ಫೋರ್ಸ್ನ 40 ಸಿಬ್ಬಂದಿ ಸೇರಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ ಇಟಿಎಫ್ನ ಸುಮಾರು 300 ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಸವಳಿದಿದ್ದಾರೆ.
ಪ್ರತಿಭಟನೆಯೂ ನಡೆದಿತ್ತು
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ & ಕಾಡುಪ್ರಾಣಿ ಸಂರ್ಷ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ರೈತ ಸಂದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆಯೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಆನೆ ಯೋಜನೆ ಮುಖ್ಯಸ್ಥೆ ಶಾಶ್ವತಿ ಮಿಶ್ರಾ, ತಿಂಗಳೊಳಗಾಗಿ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅಲ್ಲದೆ, ಕೆಲವು ಕಡೆಗಳಲ್ಲಿ ರೈಲು ಕಂಬಿಗಳ ಬ್ಯಾರಿಕೇಡ್ಗಳನ್ನು ನಿರ್ಮಿಸುವ ಮೂಲಕ ಆನೆಗಳು ಕಾವೇರಿ ಮತ್ತು ಬನ್ನೇರುಟ್ಟ ಅರಣ್ಯದಿಂದ ಜಿಲ್ಲೆಗೆ ಆಗಮಿಸದಂತೆ ತಡೆಯುವ ಭರವಸೆ ನೀಡಿದ್ದರು.
ಗಂಭೀರ ನಿರ್ಧಾರ ಬೇಕಿದೆ
ಆನೆ ಸೇರಿ ವಿವಿಧ ಕಾಡು ಪ್ರಾಣಿಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಜಿಲ್ಲೆ ಹಿಂದಿನಿಂದಲೂ ಚಿರತೆ ಮತ್ತು ಕರಡಿಗಳ ಆವಾಸ ಸ್ಥಾನವಾಗಿದೆ. ಇವುಗಳೊಂದಿಗೆ ಆಗಾಗ ಮಾನವ ಸಂರ್ಷ ನಡೆಯುತ್ತಲೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಆನೆಗಳ ಹಾವಳಿ ಹೆಚ್ಚಿದೆ. ರೈತರ ಫಸಲು ನಾಶದ ಜತೆಗೆ ಜನ ಜಾನುವಾರುಗಳ ಪ್ರಾಣ ಹಾನಿಯೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚುತ್ತಿರುವ ಮಾನವ ಪ್ರಾಣಿ ಸಂರ್ಷ ತಡೆಯಲು ಗಂಭೀರ ನಿರ್ಧಾರ ಕೈಗೊಳ್ಳಬೇಕಿದೆ. ಎಲಿಫೆಂಟ್ ಟಾಸ್ಕ್ಫೋರ್ಸ್ ಆರಂಭಿಸುವ ನಿರ್ಧಾರ ಮಾಡಲಾಗಿದೆಯಾದರೂ, ಶಾಶ್ವತವಾಗಿ ಆನೆಗಳ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದನದಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಆನೆಗಳನ್ನು ಅವುಗಳ ಮೂಲ ಸ್ಥಾನಕ್ಕೆ ಅಟ್ಟಿದ್ದರೆ ಅದು ಸಂತೋಷದ ವಿಷಯ. ಆದರೆ ಶಾಶ್ವತವಾಗಿ ಅವು ನಮ್ಮ ಜಿಲ್ಲೆಗೆ ಬರದಂತೆ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಿದೆ. ಇಷ್ಟೂ ಕ್ರಮ ಕೈಗೊಳ್ಳದಿದ್ದರೆ ನಮ್ಮ ಜಮೀನನ್ನು ಅರಣ್ಯ ಇಲಾಖೆಗೆ ವಾರ್ಷಿಕ ಗುತ್ತಿಗೆ ನೀಡುತ್ತೇವೆ.
ಸಿ.ಪುಟ್ಟಸ್ವಾಮಿ, ರೈತ ಸಂದ ಮುಖಂಡ
ಆನೆಗಳನ್ನು ಅವುಗಳ ಮೂಲಸ್ಥಾನಕ್ಕೆ ಓಡಿಸುವ ಪ್ರಯತ್ನದಲ್ಲಿ ಕೊಂಚಮಟ್ಟಿಗಿನ ಯಶಸ್ಸು ಸಾಧಿಸಿದ್ದೇವೆ. ಇನ್ನೂ ಕೆಲವು ಆನೆಗಳಿದ್ದು ಅವುಗಳನ್ನು ಓಡಿಸುವ ಪ್ರಯತ್ನ ಮುಂದುವರಿದಿದೆ. ಅಗತ್ಯ ಇರುವ ಕಡೆಗಳಲ್ಲಿ ಬೇಲಿ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ದೇವರಾಜು, ಡಿಸಿಎಫ್, ಪ್ರಾದೇಶಿಕ ಅರಣ್ಯ ರಾಮನಗರ