ಕೈಲಾಂಚ(ರಾಮನಗರ): ಹೋಬಳಿಯ ಹುಲಿಕೆರೆ-ಗುನ್ನೂರು ಗ್ರಾಪಂ ವ್ಯಾಪ್ತಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರಬೆಟ್ಟ ಅಮ್ಮನಪುರದೊಡ್ಡಿ ಗ್ರಾಮದಲ್ಲಿ ಎಂಟು ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬಾಳೆತೋಟ, ತೆಂಗು, ಮಾವಿನಮರ, ಮಾವಿನ ಫಸಲು ನಾಶಪಡಿಸಿವೆ.
ಶುಕ್ರವಾರ ರಾತ್ರಿ ಆನೆಗಳ ಹಿಂಡು ದಾಸೋಹ ಮಠದ ಸ್ವಾಮೀಜಿ ಬಸವಲಿಂಗರಾಜ ಸ್ವಾಮಿಗಳ ತೋಟಕ್ಕೆ ನುಗ್ಗಿ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಫಸಲನ್ನು ನಾಶಪಡಿಸಿವೆ. ಜತೆಗೆ ತೆಂಗಿನಮರ, ಮಾವಿನ ಮರ ಮಾವಿನ ಫಸಲಿಗೂ ಹಾನಿಯುಂಟುಮಾಡಿವೆ.
ಅಮ್ಮನಪುರ ಗ್ರಾಮದಲ್ಲಿ ಲಕ್ಷ್ಮಮ್ಮ ನಾಯ್ಕ, ನಾಗೂನಾಯ್ಕ, ರಮೇಶ್ನಾಯ್ಕ ಎಂಬುವರ ಮಾವಿನ ಮರ, ಮಾವಿನ ಫಸಲು, ರೇಷ್ಮೆ ತೋಟ, ಹುಣಸೇಮರ, ತೆಂಗಿನಮರ, ನೀರಾವರಿ ಪರಿಕರಗಳನ್ನು ನಾಶಪಡಿಸಿವೆ.
ಕೂಡಲೇ ಅರಣ್ಯ ಇಲಾಖೆ ಬೆಳೆ ನಾಶಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ತೆಂಗಿನಕಲ್ಲು ಅರಣ್ಯದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಬಸವಲಿಂಗರಾಜ ಸ್ವಾಮೀಜಿ ಆಗ್ರಹಿಸಿದ್ದಾರೆ.
ವಿಷಯ ತಿಳಿದ ಕೂಡಲೇ ರಾಮನಗರ ಉಪ ವಲಯ ಅರಣ್ಯ ಅಧಿಕಾರಿ ಕೆ. ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇಲಾಖೆಯಿಂದ ದೊರೆಯುವ ಪರಿಹಾರ ಕೊಡಿಸುವ ಭರವಸೆ ನೀಡಿದರು.
ತೆಂಗಿನಕಲ್ಲು ಅರಣ್ಯದಲ್ಲಿ ಮೂರು, ನಾಲ್ಕು, ಎರಡು ಹೀಗೆ ಗುಂಪುಗಳಲ್ಲಿ ಓಡಾಡುತ್ತಿವೆ. ಶುಕ್ರವಾರ ರಾತ್ರಿ ಎಂಟು ಆನೆಗಳ ಹಿಂಡು ಒಟ್ಟಿಗೆ ಸೇರಿವೆ. ಆನೆಗಳ ಜಾಡು ಸಿಕ್ಕಿದ್ದು ಎಂಟು ಆನೆಗಳನ್ನು ಇಂದು ರಾತ್ರಿಯೇ ಅರಣ್ಯದಿಂದ ಸ್ವಸ್ಥಾನ ಸೇರಿಸುವ ಕಾರ್ಯಾಚರಣೆ ನಡೆಸಲಾಗುವುದು.
ಕಿರಣ್ಕುಮಾರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ.