ಜಿಲ್ಲೆ

ಆನೆ ದಾಳಿಗೆ ಕಾಲು ಮುರಿತ, ಹಸು ಬಲಿ ಗೊಲ್ಲರದೊಡ್ಡಿ ಗ್ರಾಮದಲ್ಲಿ ಒಂಟಿ ಸಲಗದ ದಾಂಧಲೆ

ಗಂಗಾಧರ ಬಿ ವಿ

ಚನ್ನಪಟ್ಟಣ

ಚನ್ನಪಟ್ಟಣ ತಾಲೂಕಿನಲ್ಲಿ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಮುಂದುವರಿದಿದೆ. ಒಂಟಿ ಸಲಗದ ದಾಳಿಗೆ ಒಬ್ಬರು ಗಾಯಗೊಂಡಿದ್ದು, ಹಸುವೊಂದು ಮೃತಪಟ್ಟಿರುವುದು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಗ್ರಾಮದಲ್ಲಿರುವ ಮನೆಯ ಬಳಿ ಹಸು ಕಟ್ಟುತ್ತಿದ್ದಾಗ ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಗೋಪಾಲ್ ಅವರ ಕಾಲು ಮುರಿದಿದೆ. ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಲಗದ ದಾಳಿಗೆ ಸೀಮೆ ಹಸು ಬಲಿಯಾಗಿದೆ. ಹಸುವಿನ ಹೊಟ್ಟೆಯನ್ನು ತನ್ನ ದಂತದಿಂದ ಸೀಳಿದ್ದು, ಹಸು ಸ್ಥಳದಲ್ಲೇ ಮೃತಪಟ್ಟಿದೆ. ಗಾಯಾಳು ಗೋಪಾಲ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಷ್ಟು ದಿನ ಜಮೀನಗಳ ಮೇಲೆ ದಾಳಿ ನಡೆಸಿ ಬೆಳೆ ಹಾನಿ ಮಾಡುತ್ತಿದ್ದ ಆನೆ ಈಗ ಜನವಸತಿ ಪ್ರದೇಶಕ್ಕೆ ನುಗ್ಗಿರುವುದು ಜನರ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜಕಾರಣಿಗಳ ಭೇಟಿ

ಆನೆ ದಾಳಿಯಿಂದ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಪಾಲ್ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಪ್ರತ್ಯೇಕವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳುವಿನ ಆರೋಗ್ಯ ವಿಚಾರಿಸಿದ ಯೋಗೇಶ್ವರ್ ಆನೆ ದಾಳಿ ಕುರಿತು ವಿವರ ಪಡೆದುಕೊಂಡರು. ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಸೇರಿ ಇತರ ಮುಖಂಡರು ಗಾಯಾಳು ಯೋಗಕ್ಷೇಮ ವಿಚಾರಿಸಿದರು.