ಜಿಲ್ಲೆ

ಬೊಂಬೆನಾಡಿನಲ್ಲಿ ಪಕ್ಷಾಂತರ ಅವಾಂತರ ಇಂದು ಅನ್ಯ ಪಕ್ಷ ಸೇರ್ಪಡೆ, ನಾಳೆ ಮಾತೃ ಪಕ್ಷಕ್ಕೆ ವಾಪಸ್

ಗಂಗಾಧರ ಬಿ ವಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಚುನಾವಣಾ ಹೊಸ್ತಿಲಿನಲ್ಲಿ ಬೊಂಬೆನಾಡು ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ನಡುವಿನ ಪೈಪೋಟಿಯಲ್ಲಿ ಪ್ರತಿದಿನ ಪಕ್ಷಾಂತರ, ಪಕ್ಷ ಸೇರ್ಪಡೆ, ಮರು ಸೇರ್ಪಡೆ ಜೋರಾಗಿದೆ. ಈ ಮಧ್ಯೆ ಬೂತ್‌ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಭರ್ಜರಿ ಡಿಮಾಂಡ್ ಸೃಷ್ಟಿಯಾಗಿದೆ.

ಮಾಜಿ ಸಿಎಂ ಎಚ್‌ಡಿಕೆ ಅವರನ್ನು ಮಣಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಸಿಪಿವೈ ಕ್ಷೇತ್ರದಾದ್ಯಂತ ಸ್ವಾಭಿಮಾನಿ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಈ ನಡುವೆ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಜೆಡಿಎಸ್‌ನ ಸ್ಥಳೀಯ ನಾಯಕರು ಮತ್ತೊಮ್ಮೆ ಕ್ಷೇತ್ರದಿಂದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಬೇಕಾದ ತಯಾರಿಯಲ್ಲಿದ್ದಾರೆ. ಈ ನಡುವೆ ಕಾಂಗ್ರೆಸ್ ಸಹ ಕ್ಷೇತ್ರದಲ್ಲಿ ಇತಿಮಿತಿಯ ಕಸರತ್ತು ನಡೆಸುತ್ತಿದೆ.

ಪಕ್ಷಾಂತರ ಪರ್ವ

ದಿನ ಬೆಳಗಾದರೆ ಸಾಕು ತಾಲೂಕಿನಲ್ಲಿ ಪಕ್ಷಾಂತರ ಕಾರ್ಯ ನಡೆಯುತ್ತಿದೆ. ಅನ್ಯಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆದು ಪಕ್ಷದ ಶಾಲು ಹೊದಿಸುವುದು ಸಾಮಾನ್ಯವಾಗಿದೆ. ಸಿ.ಪಿ.ಯೋಗೇಶ್ವರ್ ನಡೆಸುತ್ತಿರುವ ಸಂಕಲ್ಪ ಯಾತ್ರೆಯಲ್ಲಿ ಪಕ್ಷ ಸೇರ್ಪಡೆ ಪ್ರಮುಖ ಭಾಗವಾಗಿದೆ. ಅನ್ಯ ಪಕ್ಷದವರನ್ನು ಸೆಳೆಯುವಲ್ಲಿ ಬಿಜೆಪಿ ಮುಂದಿದ್ದು, ಹಲವಾರು ಗ್ರಾಮಗಳಲ್ಲಿ ಈಗಾಗಲೇ ಬಿಜೆಪಿ ಸೇರ್ಪಡೆ ನಡೆದಿದೆ. ಖುದ್ದು ಯೋಗೇಶ್ವರ್ ಅವರು ವಿವಿಧ ಪಕ್ಷದ ಕಾರ್ಯಕರ್ತರಿಗೆ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದಾರೆ. ಇದಕ್ಕೆ ಟಕ್ಕರ್ ಕೊಡುತ್ತಿರುವ ಜೆಡಿಎಸ್ ಪಾಳಯ ಸಹ ಬಿಜೆಪಿಗರನ್ನು ಸದ್ದಿಲ್ಲದೆ ಆಪರೇಷನ್ ನಡೆಸುತ್ತಿದೆ. ಈ ನಡುವೆ ಕಾಂಗ್ರೆಸ್ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರತವಾಗಿದೆ.

ಇಂದು ಸೇರ್ಪಡೆ, ನಾಳೆ ವಾಪಸ್!

ದಿಗ್ಗಜರ ಸೆಣಸಾಟದಿಂದ ದಿನೇದಿನೆ ಚುನಾವಣಾ ಕಣ ರಂಗೇರುತ್ತಿರುವ ಬೊಂಬೆನಾಡಿನಲ್ಲಿ ಪಕ್ಷಾಂತರ ನಗೆಪಾಟಲಿಗೆ ಈಡಾಗುತ್ತಿರುವುದು ವಿಶೇಷ. ಇಂದು ಪಕ್ಷಾಂತರ ಮಾಡಿ ಮರುದಿನ ಮಾತೃಪಕ್ಷಕ್ಕೆ ವಾಪಸಾಗುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ. ಪಕ್ಷ ಸೇರ್ಪಡೆಯಾಗುವವರಿಗೆ ಶಾಲು ಹೊದಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಡುವುದು ಸದ್ಯದ ಚುನಾವಣಾ ಕ್ರೇಜ್ ಆಗಿದೆ. ಇಂದು ಪಕ್ಷ ತೊರೆದವರು, ಮರುದಿನ ತಮ್ಮ ಪಕ್ಷದ ನಾಯಕರ ಬಳಿ ನಿಂತು ಪಕ್ಷ ಬಿಟ್ಟಿಲ್ಲ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಪಕ್ಷ ತೊರೆದವರ ಮಾಹಿತಿ ತಿಳಿಯುತ್ತಲೆೇ ಅವರನ್ನು ಮನವೊಲಿಸುವ ಕೆಲಸವೂ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಒಟ್ಟಾರೆ, ಪಕ್ಷಾಂತರ ಎಂಬುದು ಕ್ಷೇತ್ರದಲ್ಲಿ ಅವಾಂತರವಾಗಿಬಿಟ್ಟಿದೆ.

ಸ್ಥಳೀಯ ಕಲಿಗಳಿಗೆ ಬೇಡಿಕೆ

ಚುನಾವಣೆಯಲ್ಲಿ ಮತಗಳಿಕೆೆ ಪ್ರಮುಖ ಆಧಾರಗಳೆಂದರೆ ಬೂತ್‌ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರು. ಮತ ಬೇಟೆಯಲ್ಲಿ ಇವರ ಸ್ಥಾನ ಬಹುಮುಖ್ಯ. ಈ ಕಾರಣದಿಂದ ಬೂತ್ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಇಂತಹವರನ್ನೇ ಸೆಳೆಯುವ ಕಾರ್ಯವನ್ನು ಎಲ್ಲ ಪಕ್ಷಗಳು ನಡೆಸುತ್ತಿವೆ. ಇದಕ್ಕಾಗಿ ಹಣ, ಕಾಮಗಾರಿ ಹಾಗೂ ವಿವಿಧ ಆಮಿಷಗಳನ್ನು ಒಡ್ಡುತ್ತಿವೆ. ಜತೆಗೆ, ಅಸಾಧ್ಯ ಭರವಸೆಗಳನ್ನು ನೀಡಲಾಗುತ್ತಿದೆ. ಈ ನಡುವೆ ಹಲವು ಮಂದಿ ಆಂತರಿಕ ಬೇಸರ, ಇನ್ನಿತರ ಕಾರಣಗಳಿಂದ ಮಾತೃ ಪಕ್ಷಗಳನ್ನು ತೊರೆದು ಇತರ ಪಕ್ಷ ಸೇರುತ್ತಿದ್ದಾರೆ. ಚುನಾವಣೆವರೆಗೂ ಇದು ಮುಗಿಯದ ಪ್ರಹಸನವಾಗಲಿದೆ.

ಕ್ಷೇತ್ರದ ಅಭಿವೃದ್ಧಿಯಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಅವರಿಗೆ ಮತ ಹಾಕಿದ ಜನ ಬೇಸರಗೊಂಡಿದ್ದಾರೆ. ಈ ಕಾರಣಗಳಿಂದ ಪ್ರತಿಹಳ್ಳಿಗಳಲ್ಲಿ ನೂರಾರು ಮಂದಿ ಸ್ವಯಂಪ್ರೇರಿತರಾಗಿ ಬಿಜೆಪಿ ಸೇರುತ್ತಿದ್ದಾರೆ. ನಾನು ಯಾರನ್ನು ಕರೆಯುತ್ತಿಲ್ಲ. ಅವರ ನಾಯಕರ ನಡೆಗೆ ಬೇಸತ್ತು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಪಕ್ಷ ಸೇರುತ್ತಿರುವವರಿಗೆ ಹಾಕಲು ಶಾಲುಗಳು ಸಾಕಾಗುತ್ತಿಲ್ಲ.

ಸಿ.ಪಿ.ಯೋಗೇಶ್ವರ್, ಚಕ್ಕೆರೆ ಕಾರ್ಯಕ್ರಮದಲ್ಲಿ

ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ ಎಂಬುದು ಸುಳ್ಳು. ಇದು ಯೋಗೇಶ್ವರ್ ಅವರ ಗಿಮಿಕ್ ಅಷ್ಟೇ. ಮನೆ ಬಾಗಿಲಿಗೆ ಯಾರೇ ಬಂದರೂ ಅವರನ್ನು ಮಾತನಾಡಿಸುವುದು ಧರ್ಮ. ಅದನ್ನು ಪಕ್ಷ ಸೇರ್ಪಡೆ ಎಂಬಂತೆ ಹರಿಬಿಡುವ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಅವರದೇ ಪಕ್ಷದ ನೂರಾರು ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ. ಯೋಗೇಶ್ವರ್ ಅವರಿಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತೇವೆ.

ಎಚ್.ಸಿ. ಜಯಮುತ್ತು, ತಾಲೂಕು ಜೆಡಿಎಸ್ ಅಧ್ಯಕ್ಷ