ಜಿಲ್ಲೆ

ಡಿಕೆಶಿ ಸಿಎಂ ಆಗಲು ಆರ್ಶೀವದಿಸಿ ಡಿ.ಕೆ.ಸುರೇಶ್ ಮನವಿ

ಚನ್ನಪಟ್ಟಣ
ಈಗಾಗಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಈ ಬಾರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ. ಹಾಗಾಗಿ, ತಾಲೂಕಿನ ಜನತೆ ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಒಂದು ಅವಕಾಶ ನೀಡಿ ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದರು.
ನಗರದ ಜೆ.ಸಿ.ರಸ್ತೆಯಲ್ಲಿರುವ ಕೋಟೆ ಮಾರಮ್ಮ ದೇವಾಲಯ ಆವರಣದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷದ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರು, ರೈತರು, ಮಹಿಳೆಯರ ಅಭಿವೃದ್ಧಿ ಕಾಂಗ್ರೆಸ್ ‌ಪಕ್ಷದಿಂದ ಮಾತ್ರ ಸಾಧ್ಯ. ಎಲ್ಲೆಡೆ ಕಾಂಗ್ರೆಸ್ ‌ಪರ ಅಲೆ ಎದ್ದಿದೆ. ತಾಲೂಕಿನಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಜನತೆ ಬೆಂಬಲಿಸಬೇಕು. ಈ ಬಾರಿ ಈ ಕ್ಷೇತ್ರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಆರಂಭಿಸಿದ್ದೇವೆ. ನಮ್ಮ ಅಭ್ಯರ್ಥಿ ಪ್ರಸನ್ನ.ಪಿ.ಗೌಡ ಅವರಿಗೆ ಶಕ್ತಿ ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ತಾಲೂಕಿನ ಜನತೆ ಬೆಂಬಲಿಸಬೇಕು ಎಂದರು.
ಕುಮಾರಸ್ವಾಮಿ ವಿಫಲ:
ತಮ್ಮ ಭಾಷಣದುದ್ದಕ್ಕೂ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಂಸದರು, ತಾಲೂಕಿನ ಜನತೆ‌ ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಮೇಲೆ ಸಾಕಷ್ಟು ಭರವಸೆಯಿಟ್ಟು, ಮತ ನೀಡಿ ಗೆಲ್ಲಿಸಿದರು. ಇಲ್ಲಿಂದ ಗೆದ್ದು ಮುಖ್ಯಮಂತ್ರಿ ಹುದ್ದೆಯನ್ನು ಸಹ ಆಲಂಕರಿಸಿದ ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಮರೆತರು. ಒಂದು ದಿನಕ್ಕೂ ಕ್ಷೇತ್ರದ ಜನರ ಕಷ್ಟವನ್ನು ಕೇಳದವರು, ಇದೀಗ ರಾಜ್ಯದ ಜನರ ಕಷ್ಟ ಕೇಳಲು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಒಂದು ಕ್ಷೇತ್ರದ ಜನರ ಕಷ್ಟ ಕೇಳಲಾಗದ ಇವರ ಕೈಯಲ್ಲಿ ಇಡೀ ರಾಜ್ಯದ ಜನರ ಕಷ್ಟ ಆಲಿಸಲು ಸಾಧ್ಯವಾಗುತ್ತದೆಯೇ ಎಂದು ಟಾಂಗ್ ನೀಡಿದರು. 
ಕ್ಷೇತ್ರಕ್ಕೆ ಪ್ರಚಾರಕ್ಕೆ ಬರದಿದ್ದರೂ ತಾಲೂಕಿನ ಜನತೆ ಸಾಕಷ್ಟು ಮತನೀಡಿ ಕುಮಾರಸ್ವಾಮಿಯವರನ್ನು ಗೆಲ್ಲಿಸಿದರು. ಅವರು ಸಿಎಂ ಆಗಿದ್ದಾಗ ತಾಲೂಕಿನ ಬಗ್ಗೆ ಸಾಕಷ್ಟು ಪ್ರೀತಿ ಇಡಬೇಕಿತ್ತು. ಆದರೆ, ಅಧಿಕಾರ ಸಿಕ್ಕರೂ ತಾಲೂಕಿನ ಜನತೆಗೆ ಉಪಯೋಗವಾಗುವ ಒಂದೇ ಒಂದು ಕಾರ್ಯಕ್ರಮ ಸಹ ಅವರು ನೀಡಿಲ್ಲ. ಅವರಿಗೆ ಇಚ್ಚಾಶಕ್ತಿ ಇದ್ದಿದರೆ, ಏನು ಬೇಕಾದರೂ ಮಾಡಬಹುದಿತ್ತು. ಕನಿಷ್ಠ ಕ್ಷೇತ್ರಕ್ಕೆ ಭೇಟಿ ನೀಡಿ ಜನರೊಂದಿಗೆ ಸೌಜನ್ಯದ ಮಾತುಗಳನ್ನು ಸಹ ಅವರು ಹೇಳಿಲ್ಲ. ಅವರಿಗೆ ಇನ್ಯಾವ ಅಧಿಕಾರ ಬೇಕು, ಮುಖ್ಯಮಂತ್ರಿ ಗಿಂತ ಅಧಿಕಾರ ಬೇಕಾ? ಎಂದು ಕುಟುಕಿದ ಸಂಸದರು, ವೋಟ್ ಹಾಕಿಸಿಕೊಳ್ಳುವುದು ಮಾತ್ರ ಮುಖ್ಯವಲ್ಲ. ಜನರ ಹಿತ ಕಾಪಾಡುವುದು ಸಹ ಅಷ್ಟೇ ಮುಖ್ಯ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಸರ್ಕಾರ ಬೀಳಲು ಅವರೇ ಕಾರಣ;
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಉರುಳಲು ನಮ್ಮಿಂದ ಆದ ಅಪರಾಧವಲ್ಲ. ನಮ್ಮ ಹಾಗೂ ಕುಮಾರಸ್ವಾಮಿ ನಡುವಿನ ರಾಜಕೀಯ ಸಂಘರ್ಷ ಏನೇ ಇದ್ದರೂ, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮಾಡಿದ ಪ್ರಯತ್ನ ಅಷ್ಟಿಷಲ್ಲ. ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಖರೀದಿಸಿ ಸರ್ಕಾರ ಬೀಳಿಸಿತು. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾದವರು ಮುಖ್ಯಮಂತ್ರಿಗಳು ಅವರೇ ಆಕೆಲಸವನ್ನು ಮಾಡಲಿಲ್ಲ. ನಮ್ಮ ಪಕ್ಷದ ಶಾಸಕರಿರಲಿ ಸ್ವತಃ ಅವರ ಪಕ್ಷದ ಶಾಸಕರೇ ಪಕ್ಷಬಿಟ್ಟು ಹೋದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಯಾಕೆ ಪಕ್ಷ ಬಿಟ್ಟು ಹೋದರು. ಸರ್ಕಾರ ಬೀಳಲು ಕುಮಾರಸ್ವಾಮಿ ಅವರ ಧೋರಣೆಯೇ ಕಾರಣವೇ ಹೊರತು ನಮ್ಮ ಪಾತ್ರವಿಲ್ಲ ಎಂದರು.
ಬಿಜೆಪಿ ವಿರುದ್ಧವೂ ವಾಗ್ದಾಳಿ:
ಬಿಜೆಪಿ ಸರ್ಕಾರದಂಥ ಭ್ರಷ್ಟಾಚಾರ ಸರ್ಕಾರ ನಮ್ಮ ರಾಜ್ಯ ಎಂದೂ ಕಂಡಿಲ್ಲ. ಯಡ್ಡಿಯೂರಪ್ಪನ ಸರ್ಕಾರ ಸಿಡಿ ಸರ್ಕಾರವಾದರೆ.., ಬೊಮ್ಮಾಯಿ ಸರ್ಕಾರ ೪೦ % ಕಮಿಷನ್ ಸರ್ಕಾರ ಎಂದು ಛೇಡಿಸಿದ ಡಿ.ಕೆ.ಸುರೇಶ್,  ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅವರದೇ ಪಕ್ಷದ  ಶಾಸಕ ಯತ್ನಾಳ್ ಹಲವು ಬಾರಿ ಮಾತಾನಾಡಿದ್ದಾರೆ. ಯತ್ನಾಳ್ ಮಾತು ನೂರಕ್ಕೆ ನೂರು ಸತ್ಯ. ಆ ಪಕ್ಷಕ್ಕೆ ನೈತಿಕತೆ ಇದಿದ್ದರೆ ಅವರನ್ನು ಯಾಕೆ ಪಕ್ಷದಿಂದ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದರು.
 
ಉದ್ಯೋಗ ನೀಡಿ ಎಂದರೆ ಅಲ್ಲೂ ಭ್ರಷ್ಟಾಚಾರ. ಈ ಕಮಿಷನ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ. ಸರ್ಕಾರ ಸರ್ಕಾರ ಇದ್ದಾಗ, ಸಿಲಿಂಡರ್ ಹೆಚ್ಚಳ ಎಂದು ತಲೆಮೇಲೆ ಸಿಲಿಂಡರ್ ಹೊತ್ತು ಬಿಜೆಪಿಗರು ಪ್ರತಿಭಟನೆ ನಡೆಸಿದ್ದರು. ಈಗ ಸಿಲಿಂಡರ್ ದುಪ್ಪಟ್ಟು ಆಗಿರುವುದು ಪಾಪ ಅವರಿಗೆ ಗೊತ್ತಾಗಿಲ್ಲ ಅನಿಸುತ್ತದೆ. ಬಿಜೆಪಿ ಈ ಹಿಂದಿ‌ನ ತನ್ನ ಪ್ರಣಾಳಿಕೆಯನ್ನು ಶೇ.೫೦ ರಷ್ಟು ಈಡೇರಿಸಿಲ್ಲ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಪ್ರಶಸ್ತಿ ಕೊಡಿ. ಅವರಿಗೆ ಸೋಲಿನ ಪ್ರಶಸ್ತಿ ಕೊಡಿ ಎಂದು ಕರೆ ನೀಡಿದರು.