ಜಿಲ್ಲೆ

ಭ್ರಷ್ಟಾಚಾರದ ಬಗ್ಗೆ ಉತ್ತರ ಕೊಡಿ ಬಿಜೆಪಿ ನಾಯಕರಿಗೆ ಸಂಸದ ಡಿ.ಕೆ. ಸುರೇಶ್​ ಒತ್ತಾಯ

ಗಂಗಾಧರ ಬಿ ವಿ

ಚನ್ನಪಟ್ಟಣ

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ  ಚುನಾವಣೆಗಾಗಿ ಅವರು ಪ್ರಚಾರ ನಡೆಸುತ್ತಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಪ್ರಚಾರದ ಜತೆಗೆ ಈ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಗ್ಗೆ ಪ್ರಧಾನಮಂತ್ರಿ ಹಾಗೂ ಆ ಪಕ್ಷದ ನಾಯಕರು ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಸಂಸದ ಡಿ.ಕೆ. ಸುರೇಶ್​ ಒತ್ತಾಯಿಸಿದರು.

ತಾಲೂಕಿನ ಕೆಂಗಲ್​ ಬಳಿ  ಹಮ್ಮಿಕೊಂಡಿದ್ದ ಪಕ್ಷದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದ ಸಂಕಲ್ಪ ಯಾತ್ರೆಯ ಬಗ್ಗೆ ಲೇವಡಿ ಮಾಡಿದರು. ಬಿಜೆಪಿ ಸರ್ಕಾರದ 40% ಕಮಿಷನ್​ ಸಾಬೀತಾಗುತ್ತಿದೆ. ಉದ್ಯೋಗಕ್ಕೋಸ್ಕರ ಹಣ ವಸೂಲಿ ಮಾಡಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ. ಎಲ್ಲ ಉದ್ಯೋಗಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಕುರಿತು ವಿಜಯಸಂಕಲ್ಪ ಯಾತ್ರೆಯಲ್ಲಿ ಆ ಪದ ನಾಯಕರು ಸತ್ಯ ಹೇಳಬೇಕು ಎಂದು ಆಗ್ರಹಿಸಿದರು.

ಅವರ ಡಬಲ್​ ಇಂಜಿನ್​ ಸರ್ಕಾರ ಇದ್ದರೂ ಬೆಲೆ ಏರಿಕೆ ಯಾಕೆ ತಡೆಯಲಿಲ್ಲ. ಜೀವನ ನಡೆಸುವುದು ಹೇಗೆಂದು ಜನ ಆತಂಕದಲ್ಲಿದ್ದಾರೆ. ಅದಕ್ಕೆ ಬಿಜೆಪಿಯ ಪರಿಹಾರ ಏನು ಅಂತ ಸಹ ಜನರಿಗೆ ತಿಳಿಸಬೇಕು. ಅವರು ರಾಜಕೀಯವಾಗಿ ಏನೇ ಮಾತಾಡಿದರೂ ನಮಗೆ ಲೆಕ್ಕ ಇಲ್ಲ. ನಾವು ಸಹ ಚುನಾವಣೆಗೆ ಸಿದ್ಧವಾಗಿದ್ದೇವೆ. ಶ್ರೀಘ್ರದಲ್ಲೆ ಜನ ತೀರ್ಪು ಕೊಡುತ್ತಾರೆ. ಬಿಜೆಪಿಯ ವಿಜಯದ ಸಂಕೇತ ಎಲ್ಲವೂ ಮುಗಿದಿದೆ. ಮುಂದಿನ ದಿನಗಳಲ್ಲಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಜನ ಬುದ್ದಿ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.

ಕುಂಟುವವರು ಅವರೇ

ಡಿಕೆಶಿ ಹಾಗೂ ಎಚ್​ಡಿಕೆ ಈಗ ಜೋಡೆತ್ತುಗಳಲ್ಲ, ಕುಂಟೆತ್ತು ಎಂಬ ಕಂದಾಯ ಸಚಿವ ಆರ್.ಅಶೋಕ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್​, ಅಶೋಕ್​ ಜತೆಯಲ್ಲಿರುವವರೆಲ್ಲಾ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ ಎಲ್ಲ ವಿಚಾರದಲ್ಲೂ ಕುಂಟುತ್ತಲೇ ಬಂದಿದೆ. ಮಾಧ್ಯಮದಲ್ಲಿ ದಿನ ತೋರಿಸುವುದಿಲ್ಲವೇ? ಯಾರು ಯಾರ ಸಿಡಿ ಬಂತು, ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು?  ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ?  ಸುಮಾರು ಎಂಟು ಕೋಟಿ ವಿಚಾರದಲ್ಲಿ ಅವರ ಕುಂಟೆತ್ತು.. ಜೋಡೆತ್ತು ಹೇಳಬೇಕೇ ಹೊರತು ಬೇರೆಯವರಲ್ಲ ಎಂದು ಕುಟುಕಿದರು.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಶೋಕ್​ ಅವರಿಗೆ ಅಭಿವೃದ್ಧಿ ಅಂದರೆ ಗೊತ್ತಿದ್ಯಾ?  ತಾಲೂಕು ಕಚೇರಿ, ಸರ್ವೇ, ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರವನ್ನು ಮೊದಲು ತಡೆಯಲಿ. ನಂತರ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದರು.