ಜಿಲ್ಲೆ

ಮತ್ತಷ್ಟು ಅಭಿವೃದ್ಧಿ ನಿರೀಕ್ಷೆಯಲ್ಲಿ ರಾಮನಗರ ; ಜಿಲ್ಲೆಗೆ 15ರ ಸಡಗರ ವಿಸ್ತರಣೆ ಕಾಣುತ್ತಿರುವ ಆರೋಗ್ಯ ಸೇವೆ

Ramanagara

ರಾಮನಗರ : ರೇಷ್ಮೆ ನಗರಿ ಖ್ಯಾತಿಯ ರಾಮನಗರಕ್ಕೆ ಈಗ 15ರ ಸಂಭ್ರಮ. 2007ರ ಆ.23ರಂದು ಬೆಂ.ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಟ್ಟು ಜಿಲ್ಲೆಯಾಗಿ ಜನ್ಮತಳೆದ ರಾಮನಗರ ಸಾಕಷ್ಟು ಬದಲಾವಣೆ ಕಂಡಿದ್ದರೂ ಮತ್ತಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರಕ್ಕೆ ಜಿಲ್ಲೆಯ ಸ್ಥಾನಮಾನ ಘೋಷಣೆ ಮಾಡಿದ್ದರು. ನಂತರದಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾದ ಮೂಲಸೌಕರ್ಯಗಳು ಒಂದೊಂದೇ ಅಭಿವೃದ್ಧಿ ಆಗುತ್ತಿವೆ. ಮುಖ್ಯವಾಗಿ ಅಧಿಕಾರದ ವಿಕೇಂದ್ರೀಕರಣವಾಗಿದ್ದು, ಜನರು ಸಣ್ಣಪುಟ್ಟ ಕಚೇರಿಗಳಿಗೂ ಬೆಂಗಳೂರಿಗೆ ಅಲೆಯುವುದು ತಪ್ಪಿದೆ. ಜಿಲ್ಲಾಧಿಕಾರಿ ಕಚೇರಿ ಸಹಿತ ಎಲ್ಲ ಸರ್ಕಾರಿ ಕಚೇರಿಗಳೂ ತಲೆ ಎತ್ತಿವೆ.

ಹೊಸ ಜಿಲ್ಲಾಸ್ಪತ್ರೆ ನಿರ್ಮಾಣದಿಂದಾಗಿ ಇಲ್ಲಿನ ಆರೋಗ್ಯ ಸೇವೆ ವಿಸ್ತರಣೆ ಕಾಣುತ್ತಿದೆ. ಜನರು ಗುಣಮಟ್ಟದ ವೈದ್ಯಕೀಯ ಸೇವೆಗೆ ರಾಜಧಾನಿಗೆ ಅಲೆಯುವುದು ತಪ್ಪಲಿದೆ. ಆರೋಗ್ಯ ಕೇಂದ್ರಗಳಿಗೂ ಅಭಿವೃದ್ಧಿಯ ಚಿಕಿತ್ಸೆ ದೊರೆತಿದೆ. ಹೊಸ ಈಜುಕೊಳ ನಿರ್ಮಾಣ ಆಗಿದೆ. ನಗರದೊಳಗಿನ ಹಲವು ಉದ್ಯಾನಗಳು ಅಭಿವೃದ್ಧಿ ಕಂಡಿವೆ. ಕಣ್ವ ಬಳಿ ಹಾಲಿನ ಪೌಡರ್ ಉತ್ಪಾದನಾ ಘಟಕ ತಲೆ ಎತ್ತಿದ್ದು, ಈ ಭಾಗದ ರೈತರಿಗೆ ಅನುಕೂಲ ಆಗಿದೆ.

ಆಗಿದೆ 50:50: ಜಿಲ್ಲಾ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಾದರೂ ಮತ್ತಷ್ಟು ಬದಲಾವಣೆಗಳ ನಿರೀಕ್ಷೆಯಲ್ಲಿದೆ. ರೇಷ್ಮೆೆ ನಗರಿ ಎಂದೇ ಖ್ಯಾತಿ ಪಡೆದಿದೆಯಾದರೂ ಇಲ್ಲಿರುವ ಮಾರುಕಟ್ಟೆ, ಕಿರಿದಾಗಿರುವುದು ಇದರ ಕೀರ್ತಿಗೆ ಕಪ್ಪು ಚುಕ್ಕೆಯಾಗಿದೆ. ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ 70 ಕೋಟಿ ವೆಚ್ಚದ ಯೋಜನೆ ರೂಪಿಸಿದೆ. ಆದರೆ ಈ ಮಾರುಕಟ್ಟೆ ಚನ್ನಪಟ್ಟಣದಲ್ಲಿ ನಿರ್ಮಾಣ ಆಗಲಿರುವುದು ಇಲ್ಲಿನ ವರ್ತಕರ ನಿದ್ದೆಗೆಡಿಸಿದೆ. ಸರ್ಕಾರ ಹಾಗೂ ಜಿಲ್ಲಾಡಳಿತವು ಜನರಲ್ಲಿನ ಈ ಗೊಂದಲ ನಿವಾರಿಸಬೇಕಿದೆ. ಕಾರಣ ಜಿಲ್ಲಾ ಕೇಂದ್ರದಲ್ಲಿ ಇನ್ನೂ ಹಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿದ್ದು ಅವುಗಳಿಗೆ ಚುರುಕು ಮುಟ್ಟಿಸುವ ಅಗತ್ಯ ಇದೆ. ಹೈಟೆಕ್ ಚಿತಾಗಾರ ನಿರ್ಮಾಣ ಕಾಮಗಾರಿ ಇನ್ನಷ್ಟ್ಟೇ ಮುಗಿದು ಜನರ ಬಳಕೆಗೆ ಲಭ್ಯವಾಗಬೇಕಿದೆ.

ಆಗಬೇಕಿದೆ ಸುಧಾರಣೆ: ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಕೆಲ ಸುಧಾರಣೆಗಳನ್ನು ತರುವ ಅಗತ್ಯ ಇದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಒಳಚರಂಡಿ ಅವ್ಯವಸ್ಥೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ವೈಜ್ಞಾನಿಕ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆತೇ ಇಲ್ಲ. ಅರ್ಕಾವತಿ ನದಿ ಶುದ್ಧೀಕರಣ ಆಗಬೇಕು, ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತ ಬಸ್ ನಿಲ್ದಾಣ, ವ್ಯವಸ್ಥಿತವಾದ ಕ್ರೀಡಾಂಗಣ, ಕನ್ನಡ ಭವನ ಸೇರಿ ಇತರ ಭವನಗಳ ನಿರ್ಮಾಣ ಆಗಬೇಕು ಎಂಬುದು ಜನರ ಒತ್ತಾಯವಾಗಿದೆ.

ಅಭಿವೃದ್ಧಿ ಪಥದತ್ತ ಬಿಡದಿ: 2016ರಲ್ಲಿ ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಿಡದಿ ಈಗ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಕೈಗಾರಿಕಾ ಪ್ರದೇಶವು ರಾಮನಗರದ ಹೆಮ್ಮೆ. ದೊಡ್ಡದೊಡ್ಡ ಕಾರ್ಖಾನೆಗಳು ಇಲ್ಲಿವೆ. ಕೈಗಾರಿಕೆಗಳ ಬೆಳವಣಿಗೆಯಿಂದ ಸುತ್ತಲಿನ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಿದೆ.

ಬಿಡದಿ ಬೈರಮಂಗಲ ಜನರಿಗೆ ಶಾಪವಾಗಿದ್ದ ವೃಷಭಾವತಿಯ ಶುದ್ಧೀಕರಣ ಕಾಮಗಾರಿಗಳು ಈಗಾಗಲೇ ನಡೆದಿದ್ದು, ಇದರಿಂದ ಜನರ ದಶಕಗಳ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣ ಮರೀಚಿಕೆ: ಜಿಲ್ಲಾ ಕೇಂದ್ರ ಘೋಷಣೆಯಾದ ಬೆನ್ನಲ್ಲೇ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಘೋಷಣೆ ಮಾಡಿದ್ದರು. ಆದರೆ, ಒಂದೂವರೆ ದಶಕ ಕಳೆದರೂ ಈ ಯೋಜನೆ ಕಾರ್ಯರೂಪಕ್ಕೆ ಬರದೇ ಇರುವುದು ಇಲ್ಲಿನ ಜನರ ಕನಸಿಗೆ ಕೊಳ್ಳಿ ಇಟ್ಟಿದೆ.

ಜಿಲ್ಲೆಯಾಗಿ ರಾಮನಗರ ರೂಪುಗೊಂಡರೂ ಸಾಕಷ್ಟು ಬದಲಾವಣೆಗಳು ಜಿಲ್ಲೆಯಲ್ಲಿ ಆಗಬೇಕಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣವಾಗಬೇಕು. ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ಲೋಕಾರ್ಪಣೆಗೊಳ್ಳಬೇಕು. ಬಸ್ ನಿಲ್ದಾಣದ ಸಾಕಷ್ಟು ಸಮಸ್ಯೆ ಇದೆ. ಸರ್ಕಾರಿ ಕಚೇರಿಗಳು ಇನ್ನೂ ಭ್ರಷ್ಟಾಚಾರ ಮುಕ್ತವಾಗಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ. ಕಾಂತರಾಜ ಪಟೇಲ್, ರಾಮನಗರ ಹಿರಿಯ ಮುಖಂಡ 15 ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕು ಎನ್ನುವ ನಿರೀಕ್ಷೆ ಇದೆಯಾದರೂ, ಇದಕ್ಕೆ ಅಧಿಕಾರಸ್ಥರು ಹೆಚ್ಚಿನ ಗಮನಹರಿಸಬೇಕು. ತಾಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇವುಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಪ್ರಸನ್ನ, ಯುವ ಮುಖಂಡ