ರಾಮನಗರ
ನಗರಸಭೆ ಪ್ರಶಸ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯೆಕ್ಷೆ ಪವಿತ್ರ 2023-24ನೇ ಸಾಲಿಗೆ 95.41 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.
ರಾಮನಗರ ನಗರವನ್ನು ಸುಂದರ ಮತ್ತು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವು ಕಾರ್ಯಕ್ರಮಗಳ ಮೂಲಕ ಶ್ರಮಿಸಲಾಗುತ್ತಿದೆ. ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲವೇ ಪ್ರಧಾನವಾಗಿದ್ದು ಆರ್ಥಿಕ ವರ್ಷದಲ್ಲಿ ಸಂಪನ್ಮೂಲ ಕ್ರೋಡಿಕರಣಕ್ಕೂ ಒತ್ತು ನೀಡಲಾಗಿದೆ ಎಂದರು.
ನಗರಸಭೆ ಆದಾಯದ ಮೂಲವಾದ ಮನೆ ಕಂದಾಯ, ಮಳಿಗೆ ಬಾಡಿಗೆ, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ ಶುಲ್ಕ, ಇತರ ತೆರಿಗೆಗಳ ಕಡೆ ಗಮನ ನೀಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಾದ 15ನೇ ಹಣಕಾಸು ಯೋಜನೆ, ಎಸ್ಎಫ್ಸಿ ಮುಕ್ತನಿಧಿ ಮತ್ತು ವಿಶೇಷ ಅನುದಾನ ಮೂಲಗಳಿಂದ ಹೆಚ್ಚಿನ ಧನಸಹಾಯ ನಿರೀಕ್ಷಿಸಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಕಲೆ, ಸಾಹಿತ್ಯ, ಕ್ರೀಡೆ, ಸಾಂಸತಿಕ ಚಟುವಟಿಕೆ, ಮೂಲಸೌಕರ್ಯ ಅಭಿವೃದ್ಧಿಗೂ ಬಜೆಟ್ನಲ್ಲಿ ಗಮನಹರಿಸಲಾಗಿದೆ ಎಂದರು.
ವಿವಿಧ ಅನುದಾನ ಬಳಸುವ ಉದ್ದೇಶ
2023-24ನೇ ಸಾಲಿನಲ್ಲಿ ಅಮೃತ ನಗರೋತ್ಥಾನ 4ನೇ ಹಂತ ಯೋಜನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ. ಎಸ್.ಎಫ್.ಸಿ. ವಿಶೇಷ ಅನುದಾನ 10 ಕೋಟಿ ನಿರೀಕ್ಷಿಸಲಾಗಿದೆ. ನೇರಪಾವತಿ ಪೌರ ಕಾರ್ಮಿಕರ ವೇತನಕ್ಕೆ ಮುಕ್ತನಿಧಿ ಯೋಜನೆಯ ಅನುದಾನ ನೀರೀಕ್ಷಿಸಲಾಗಿದೆ. 15 ನೇ ಹಣಕಾಸು ಅನುದಾನದಲ್ಲಿ ನಗರದ ರಸ್ತೆ, ಚರಂಡಿ, ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು, ಘನತ್ಯಾಜ್ಯ ವಸ್ತು ನಿರ್ವಹಣೆ, ಶೌಚಾಲಯ, ನಿಮಾರ್ಣ ನಿರ್ವಹಣೆ, ಸ್ಮಶಾನ ನಿರ್ವಹಣೆ ಸೇರಿದಂತೆ ಕಛೇರಿ ನಿರ್ವಹಣೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ 425 ಲಕ್ಷ ರೂ. ಬಳಸಲು ಉದ್ದೇಶಿಸಲಾಗಿದೆ ಎಂದು ಪವಿತ್ರ ತಿಳಿಸಿದರು.
ನಗರದ ಉದ್ಯಾನವನ ಅಭಿವೃದ್ಧಿ, ಕ್ರೀಡೆ, ಸಾಂಸತಿಕ ಚಟುವಟಿಕೆ, ಸ್ಥಳಿಯ ಹಬ್ಬಗಳು, ಬಯೋಗ್ಯಾಸ್ ಮತ್ತು ಕಾಂಪೋಸ್ಟ್ ಗೊಬ್ಬರ ಉತ್ಪಾದನೆಗಾಗಿ, ಸ್ಮಶಾನ ಅಭಿವೃದ್ಧಿಗಾಗಿ ನೀರು ಸರಬರಾಜು ಕಾಮಗಾರಿಗಳಿಗಾಗಿ ವಿದ್ಯುತ್ ದೀಪ ನಿರ್ವಹಣೆಗೆ ಹಣ ಮೀಸಲು ನಿಗದಿ ಮಾಡಲಾಗಿದೆ. ನಗರಸಭೆ ಆದಾಯಕ್ಕೆ ಅಂಗಡಿ ಮಳಿಗೆಗಳ ವ್ಯಾಪಾರ ಪರವಾನಿಗೆ, ಜಾಹಿರಾತು ತೆರಿಗೆ, ಹೊಸ ಮನೆ ಕಟ್ಟಡ ಪರವಾನಿಗೆಯಿಂದ ಆದಾಯ ನಿರೀಕ್ಷಿಸಲಾಗಿದೆ. ಕುಡಿಯುವ ನೀರಿನ ಅಭಾವ ತಪ್ಪಿಸಲು ರಾಜ್ಯ ಸರ್ಕಾರದ 10 ಲಕ್ಷ ರೂ. ಅನುದಾನ ನೀರೀಕ್ಷಿಸಲಾಗಿದ್ದು ಸದರಿ ಅನುದಾನದಲ್ಲಿ ನೀರು ಸರಬರಾಜು ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷೆ ಬಿ.ಕೆ. ಪವಿತ್ರ ಬಜೆಟ್ನ ಅಂಶಗಳನ್ನು ಸಭೆಗೆ ಮಂಡಿಸಿ ಸದಸ್ಯ ಅನುಮೋದನೆಯನ್ನು ಪಡೆದುಕೊಂಡರು.
ನಗರಸಭೆ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಕೆಎಸ್ಆರ್ಟಿಸಿ ನಿಗಮ ಮತ್ತು ನಗರಸಭೆ ನಡುವೆ ಕೋರ್ಟಿನಲ್ಲಿ ದಾವೆಯಿದ್ದು, ನಗರಸಭೆ ವಿರುದ್ದ ಹೆಚ್ಚಿನ ಪರಿಹಾರ ನೀಡುವ ಕುರಿತು ಆದೇಶ ಬಂದಲ್ಲಿ ಮುಂಜಾಗ್ರತಾ ಕ್ರಮವಾಗಿ ವಹಿಸಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ತುರ್ತು ಸಭೆ ಕರೆದು ಚರ್ಚಿಸೋಣ ಎಂದು ಸದಸ್ಯ ಕೆ.ಶೇಷಾದ್ರಿ ಅಧಿಕಾರಿಗಳಿಗೆ ಸಲಹೆ ನೀಡಿದರು.