ಜಿಲ್ಲೆ

ಬೊಂಬೆನಾಡದಲ್ಲಿ ಮುಂದುವರಿದ ಆನೆ ದಾಳಿ ಟೊಮ್ಯಾಟೋ ಬೆಳೆ ನಾಶ

ಗಂಗಾಧರ ಬಿ ವಿ
ಚನ್ನಪಟ್ಟಣ
ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಈ ಬಾರಿ ಅತಿ ದುಬಾರಿ ಎನ್ನಲಾಗುವ ಟೊಮ್ಯಾಟೋ ಬೆಳೆ ಮೇಲೆ ಗಜಪಡೆಯ ವಕ್ರದೃಷ್ಠಿ ಬೀರಿರುವುದು ವಿಶೇಷವಾಗಿದೆ.
ಹೌದು...., ಬೊಂಬೆನಾಡು ಚನ್ನಪಟ್ಟಣದಲ್ಲಿ ಕಾಡಾನೆ ಸಮಸ್ಯೆಗೆ ಕೊನೆಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕಾಡಂಚಿನ ಗ್ರಾಮಗಳಿಂದ ಹಿಡಿದು ತಾಲೂಕಿನ ಹಲವೆಡೆ ಗಜಪಡೆಯ ಹಾವಳಿ ನಿರಂತರವಾಗಿ ಸಾಗುತ್ತಿದೆ. ಬುಧವಾರ ರಾತ್ರಿ ತಗಚಗೆರೆ ಗ್ರಾಮದ ಅಸುಪಾಸಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು, ಹಲವು ರೈತರ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.
ತಗಚಗೆರೆ ಗ್ರಾಮದ ರೈತರಾದ ಭಾಸ್ಕರ್ ಸ್ವಾಮಿ, ಸೋಮಣ್ಣ, ಶಶಿಧರ್, ಪುರೊಷೊತ್ತಮ್ , ಬಸವಣ್ಣ, ಕೋಟೆ ರಾಚಪ್ಪ ಸೇರಿದಂತೆ ಹಲವರ ಜಮೀನುಗಳ ಮೇಲೆ ದಾಳಿ ಮಾಡಿರುವ ಕಾಡಾನೆಗಳು ತೆಂಗು, ಬಾಳೆ ಸೇರಿದಂತೆ ಅಪಾರವಾದ ಬೆಳೆಹಾನಿ ಮಾಡಿವೆ. ಭಾಸ್ಕರ್ ಸ್ವಾಮಿ ಎಂಬುವವರ ತೆಂಗು, ಬಾಳೆ, ರೇಷ್ಮೆ ಹಾಗೂ ಟೊಮ್ಯಾಟೋ ಬೆಳೆಯನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ.
ಪುರುಷೊತ್ತಮ್ ಹಾಗೂ ಶಶಿಧರ್ ಸೇರಿದಂತೆ ಹಲವು ರೈತರ ಜಮೀನುಗಳಲ್ಲಿ ಹತ್ತಾರು ಬೃಹತ್ ತೆಂಗಿನಮರಗಳನ್ನು ಉರುಳಿಸಿವೆ. ಕಟಾವು ಹಂತದಲ್ಲಿದ್ದ ಟೊಮ್ಯಾಟೋ ಗಿಡಗಳನ್ನು ಮನಸೋಇಚ್ಚೆ ತುಳಿದು ಹಾಳುಮಾಡಿವೆ.
ಕೊನೆ ಇಲ್ಲವೇ?
ತಾಲೂಕಿನಲ್ಲಿ ಕಾಡಾನೆಗಳ ದಾಳಿಗೆ ಕೊನೆ ಇಲ್ಲವೇ ಎಂದು ಈ ಭಾಗದ ರೈತರು ತೀವ್ರ ಅಕ್ರೋಶವ್ಯಕ್ತಪಡಿಸಿದ್ದಾರೆ. ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಈ ರೀತಿಯಾದರೆ ನಾವು ಬದುಕುವುದು ಯಾಕೆ? ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಈ ಸಮಸ್ಯೆ ತಡೆಗಟ್ಟಲು ಸಾಧ್ಯವಾಗದಿರುವುದು ನಾಚೀಕೆಗೇಡು ಎಂದು ರೈತರು ಕಿಡಿಕಾರಿದ್ದಾರೆ. ಹಲವು ತಿಂಗಳುಗಳಿಂದ ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದೆ.
ಬೆಳೆಹಾನಿ ಜೊತೆಗೆ ಪ್ರಾಣಹಾನಿ ಸಹ ಸಾಮಾನ್ಯವಾಗಿದೆ. ಹೆಸರಿಗೆ ಮಾತ್ರ ಆನೆ ಸೆರೆ ಹಾಗೂ ವಾಸಸ್ಥಾನಕ್ಕೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿವೆ.‌ಆದರೆ, ನಮ್ಮ ಬದುಕು ಹಾಳಾಗುವುದು ಮಾತ್ರ ನಿಂತಿಲ್ಲ ಎಂದು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಈ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೊಮ್ಯಾಟೋ ಬೆಳೆಯ ಮೇಲೆ ದಾಳಿ ಮಾಡಿದ ಕಾಡಾನೆಗಳ ಹಿಂಡು ಲಕ್ಷಾಂತರ ಮೌಲ್ಯದ ಬೆಳೆ ಹಾನಿಮಾಡಿದ್ದು,ಟೊಮ್ಯಾಟೋಗೆ ಬಂಪರ್ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಒಳ್ಳೆಯ ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದರು.ಇದೀಗ, ಬೆಳೆ ಗಜರಾಯನ ಪಾಲಾಗಿದ್ದು, ಸೂಕ್ತ ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ.