1.74 ಲಕ್ಷ ರೂ. ಕಳೆದುಕೊಂಡ ಚನ್ನಪಟ್ಟಣದ ಶಿವಕಾಳು
ರಾಮನಗರ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕವೇ ವಂಚನೆ ಮಾಡಿರುವ ಪ್ರಕರಣ ಸೈಬರ್ ಕೆಂ ಠಾಣೆಯಲ್ಲಿ ದಾಖಲಾಗಿದೆ.
ಚನ್ನಪಟ್ಟಣದ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಶಿವಕಾಳು ಹಣ ಕಳೆದುಕೊಂಡವರು. ಜು.13ರಂದು ಶಿವಕಾಳು ಅವರ ಮೊಬೈಲ್ಗೆ ಕರೆ ಬಂದಿದ್ದು ನಿಮಗೆ ಪಿಎಂ ಮುದ್ರಾ ಯೋಜನೆಯಡಿ 5 ಲಕ್ಷ ರೂ. ಸಾಲವನ್ನು ಕೊಡಿಸುವುದಾಗಿ ಹೇಳಿದ್ದಾರೆ. ನಂತರ ವಾಟ್ಸ್ ಆ್ಯಪ್ ಸಂಖ್ಯೆಗೆ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ಇದಾದ ನಂತರ ಕೋರ್ಟ್ ಫೀ, ಖಾತೆ ಚಾರ್ಜ್, ವಿಮೆ, ಇತರ ಖರ್ಚುಗಳು ಎಂದು ಒಟ್ಟು 1,74,800 ರೂ.ಗಳನ್ನು ಪಡೆದುಕೊಂಡಿದ್ದಾರೆ.
ನಂತರ ವಿಚಾರಿಸಿದರೆ ಸಾಲವೂ ಇಲ್ಲದೆ, ಕೊಟ್ಟ ಹಣವೂ ಇಲ್ಲದೆ ಮೋಸ ಹೋಗಿರುವುದು ಗೊತ್ತಾಗಿದೆ. ವಂಚನೆಗೊಳಗಾಗಿರುವ ಬಗ್ಗೆ ಸೈಬರ್ ಪೊಲೀಸರಿಗೆ ಶಿವಕಾಳು ದೂರು ನೀಡಿದ್ದಾರೆ.