ಜಿಲ್ಲೆ

ವೃದ್ಧಾಪ್ಯ ವೇತನ ಪಡೆಯುವ ಆಸೆಯಲ್ಲಿ ಚಿನ್ನ ಕಳೆದುಕೊಂಡ ವೃದ್ಧೆ

ಚನ್ನಪಟ್ಟಣ
ಅಂಚೆಕಚೇರಿಯಲ್ಲಿ ವೃದ್ಧಾಪ್ಯ ಹಣ ಮಾಡಿಸಿಕೊಡುವುದಾಗಿ ಮಹಿಳೆಯೊರ್ವರನ್ನು ನಂಬಿಸಿದ, ಅಪರಿಚಿತ ವ್ಯಕ್ತಿಯೊರ್ವ ಆಕೆಯನ್ನು ಪುಸಲಾಯಿಸಿ, ಚಿನ್ನದ ಸರವನ್ನು ಕಳವು‌ ಮಾಡಿರುವ ಘಟನೆ ನಗರದ ಅಂಚೆಕಚೇರಿ ಬಳಿ ಗುರುವಾರ ನಡೆದಿದೆ.
ತಾಲೂಕಿನ ಹಾರೋಕೊಪ್ಪ ಗ್ರಾಮದ ಸಾವಿತ್ರಮ್ಮ (62) ಅಪರಿಚಿತ ವ್ಯಕ್ತಿಯನ್ನು ನಂಬಿ‌ ಚಿನ್ನ ಕಳೆದುಕೊಂಡ ಮಹಿಳೆ. ಈಕೆ ಕಾರ್ಯನಿಮಿತ್ತ ನಗರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ತರಕಾರಿ ತೆಗೆದುಕೊಳ್ಳಲು ಅಂಚೆಕಚೇರಿ ರಸ್ತೆಯಲ್ಲಿ ನಿಂತಿದ್ದ ಈಕೆಯ ಬಳಿ ಬಂದ ಅಪರಿಚಿತ ವ್ಯಕ್ತಿಯೊರ್ವ ಮೊದಲು ತೀರಾ ಪರಿಚಯ ಹಾಗೂ ನಂಬಿಕಸ್ಥನ ತರ ಆಕೆಯನ್ನು ಮಾತಿಗೇಳಿದಿದ್ದಾನೆ.
ಅಂಚೆಕಚೇರಿಯಲ್ಲಿ ೬೦ ವರ್ಷ ಆದವರಿಗೆ ನಾಲ್ಕು ಸಾವಿರ ಹಣ ಕೊಡುತ್ತಿದ್ದಾರೆ, ನೀವು ಸಹ ಮಾಡಿಸಿಕೊಳ್ಳಿ ಎಂದಿದ್ದಾನೆ. ತದನಂತರ, ನಾನೇ ಹಣ ಮಾಡಿಸಿಕೊಡುವುದಾಗಿ ಆಕೆಯನ್ನು ನಂಬಿಸಿದ್ದಾನೆ. ಈ ಹಣ ಪಡೆಯಲು ವೈದ್ಯರ ಸಹಿ ಬೇಕು ಎಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಲ್ಲಿ ಓಪಿಡಿ ಚೀಟಿ ಬರೆಸಿಕೊಂಡು ವೈದ್ಯರನ್ನು ಕಾಣುವ ನಾಟಕವಾಡಿದ್ದಾನೆ.
ಈ‌ ಮಧ್ಯೆ ಮಹಿಳೆಯ ಗಮನ ಬೇರೆಡೆಗೆ ಸೆಳೆದು ಆಕೆಯ ಕುತ್ತಿಯಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕದ್ದು ಸ್ಥಳದಿಂದ ನಾಪತ್ತೆಯಾಗಿದ್ದಾನೆ‌. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪುರ‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಾಗುತ್ತಿವೆ ಕಳ್ಳತನ ಪ್ರಕರಣಗಳು?
ನಗರದಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಬೈಕ್, ಮನೆಗಳ್ಳತನ, ಮೊಬೈಲ್ ಸೇರಿದಂತೆ ಕಳ್ಳತನ ಪ್ರಕರಣಗಳ ಹೆಚ್ಚಾಗುತ್ತಿದ್ದು, ಇತ್ತೀಚಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೆಎಸ್ಐಸಿ ಮಿಲ್ ಸೇರಿದಂತೆ ಹಲವೆಡೆ ಕಳ್ಳತನಗಳು ನಡೆದಿವೆ. ಇದರೊಂದಿಗೆ ನಗರದ ಸರ್ಕಾರಿ ಬಸ್ ನಿಲ್ದಾಣವಂತೂ ಮೊಬೈಲ್ ಕಳ್ಳರ ಹಾಟ್ ಸ್ಪಾಂಟ್ ಆಗಿ ಬದಲಾಗಿದೆ. ಇದೀಗ, ಹಾಡಹಗಲೇ ಅದೂ ನಗರದ ಜನನಿಬಿಡ ಪ್ರದೇಶದಲ್ಲೇ ಮಹಿಳೆಯ ಚಿನ್ನದ ಸರ ಕಸಿದಿರುವುದು ಆತಂಕಕ್ಕೆ ಕಾರಣವಾಗಿದೆ.