ಚನ್ನಪಟ್ಟಣ
ಮಣಿಪುರದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಮಣಿಪುರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್ಗೌಡ ಆಗ್ರಹಿಸಿದರು.
ಘಟನೆಯನ್ನು ಖಂಡಿಸಿ ನಗರದ ಕಾವೇರಿ ಸರ್ಕಲ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಣಿಪುರದಲ್ಲಿ ಮೂರು ತಿಂಗಳಿಂದ ಜನಾಂಗೀಯ ಘರ್ಷಣೆ, ಕೊಲೆ, ಲೂಟಿ, ಧಂಗೆ ನಡೆಯುತ್ತಿದ್ದರೂ, ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರಕರಣ ವಿಕೋಪಕ್ಕೆ ತೆರಳಿ, ಮಹಿಳೆಯರನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವುದು ಖಂಡನೀಯ.
ಕೇಂದ್ರ ಸರ್ಕಾರ ಮಣಿಪುರ ಸರ್ಕಾರವನ್ನು ವಜಾ ಮಾಡಿ, ಈ ಘಟನೆಗೆ ಕಾರಣವಾದವರಿಗೆ ಶಿೆಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕಿ ರಾಧಿಕಾ ರವಿಕುಮಾರ್ಗೌಡ ಮಾತನಾಡಿ, ಮಣಿಪುರದ ಘಟನೆ ಮನುಕುಲವೇ ನಾಚಿಕೆಪಡುವ ಸಂಗತಿಯಾಗಿದೆ. ಇಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ನಾವೆಲ್ಲ ಮೌನವಾಗಿದ್ದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಭಯಾನಕ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಕ್ರೌರ್ಯ ಮೆರೆದವರ ಬಗ್ಗೆ ವಿಡಿಯೋ ಸಹಿತ ಸಾಕ್ಷಿ ಆಧಾರಗಳಿದ್ದರೂ ಮಣಿಪುರ ಸರ್ಕಾರ ಕಾನೂನು ವ್ಯವಸ್ಥೆಯಲ್ಲಿ ಅವರನ್ನು ಶಿಕ್ಷೆಗೆ ಒಳಪಡಿಸದೆ ಇರುವುದು ನೋವಿನ ಸಂಗತಿಯಾಗಿದೆ ಎಂದರು.
ಸಾಹಿತಿ ಚೌ.ಪು.ಸ್ವಾಮಿ ಮಾತನಾಡಿ, ನಮ್ಮ ದೇಶವು ಹೆಣ್ಣನ್ನು ಗೌರವದಿಂದ ಪೂಜಿಸುವ ಸಂಸತಿ ಹೊಂದಿದೆ. ಇಂತಹ ದೇಶದಲ್ಲಿ ಪ್ರಜಾಪ್ರಭುತ್ವ ತಲೆ ತಗ್ಗಿಸುವ ಕಾರ್ಯವಾಗಿದೆ. ಪ್ರತಿಯೊಬ್ಬರ ಮಾನ, ಪ್ರಾಣದ ರಕ್ಷಣೆ ಸರ್ಕಾರಗಳ ಮೊದಲ ಕರ್ತವ್ಯವಾಗಿದ್ದು, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳಿಗೆ ಶಿೆಕ್ಷೆ ಆಗಬೇಕು ಎಂದರು.
ಡಾ.ರಾಜ್ ಕಲಾ ಬಳಗದ ಎಲೇಕೇರಿ ಮಂಜುನಾಥ್ ಮಾತನಾಡಿದರು. ಮುಖಂಡರಾದ ಮಧುಸೂದನ್ ಬೇವೂರು ವೇದಿಕೆಯ ಪದಾಧಿಕಾರಿಗಳು ಇದ್ದರು.