ಜಿಲ್ಲೆ

ತಾರಕಕ್ಕೇರಿದ ಮಹಿಳಾ ಬ್ಯಾಂಕ್ ಒಳಜಗಳ ಕೆಲ ನಿರ್ದೇಶಕರ ಸಾಮೂಹಿಕ ರಾಜೀನಾಮೆ ಮತ್ತೊಮ್ಮೆ ಬೀದಿಗೆ ಬಿದ್ದ ಬಣ ಸಂಘರ್ಷ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಒಳಜಗಳ ತಾರಕಕ್ಕೇರಿದೆ. ಇದೀಗ, ಬ್ಯಾಂಕ್‌ನ ಕೆಲ ನಿರ್ದೇಶಕರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಎರಡು ಬಣಗಳ ನಡುವಿನ ಸಂಘರ್ಷ ಮತ್ತೊಮ್ಮೆ ಬೀದಿಗೆ ಬಂದಿದೆ.

ತಾಲೂಕಿನ ಹಿರಿಯ ಮಹಿಳಾ ಮುಖಂಡೆ ವಿಜಯಲಕ್ಷ್ಮಿ ರಾಮಣ್ಣ ಎಂಬುವವರು ಮಹಿಳೆಯರ ಅಭ್ಯುದಯದ ಆಶಯದಿಂದ 1999ರ ಡಿ.3ರಂದು ನಗರದಲ್ಲಿ ಸಹಕಾರ ಬ್ಯಾಂಕ್ ಪ್ರಾರಂಭಿಸಿದರು. ಪ್ರಸುತ್ತ ಬ್ಯಾಂಕ್‌ನಲ್ಲಿ 3.5 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಸಾಲ ಸೌಲಭ್ಯ ಸೇರಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಬ್ಯಾಂಕ್ ಆಡಳಿತ ಮಂಡಳಿಯ ಕೆಲ ನಿರ್ದೇಶಕರ ನಡುವೆ ಒಳಜಗಳ ನಡೆಯುತ್ತಿದ್ದು, ಎರಡು ಬಣಗಳ ನಡುವಿನ ತಿಕ್ಕಾಟದಿಂದ ಬ್ಯಾಂಕ್‌ನ ಗೌರವಕ್ಕೆ ಧಕ್ಕೆ ಉಂಟಾಗಿದೆ.

ಬ್ಯಾಂಕ್‌ನ ಅಧ್ಯಕ್ಷೆ ವಿಜಯಲಕ್ಷ್ಮಿ ರಾಮಣ್ಣ ಹಾಗೂ ಹಿಂದಿನ ಉಪಾಧ್ಯಕ್ಷೆ ಸುಮತಾ ಬಣಗಳ ನಡುವೆ ಕೆಲ ವಿಚಾರಗಳ ಬಗ್ಗೆ ಹಿಂದಿನಿಂದಲೂ ಸಂಘರ್ಷವಿತ್ತು. ಎರಡೂ ಬಣಗಳು ಪ್ರತಿಷ್ಠೆಗೆ ಬಿದ್ದಿರುವುದರಿಂದ ಬ್ಯಾಂಕ್ ರಂಪಾಟ ಈ ಹಿಂದೆಯೇ ಬೀದಿಗೆ ಬಂದಿತ್ತು. ಕಳೆದ ವರ್ಷ ಬಣಗಳ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯಾಂಕ್‌ನ ನಡಾವಳಿ ಪುಸ್ತಕ ಕಳವು ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ನಾಲ್ವರು ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿತ್ತು. ಕಳೆದ ಭಾನುವಾರ ನಡೆದ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯತ್ವಕ್ಕೆ ಸ್ಥಳೀಯ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಉಪಾಧ್ಯಕ್ಷೆ ಸುಮತಾ ಅವರನ್ನು ಉಪಾಧ್ಯಕ್ಷೆ ಹಾಗೂ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಬುಧವಾರ ಬ್ಯಾಂಕ್‌ನ ಕೆಲ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದು ಜಗಳ ತಾರಕಕ್ಕೇರಿದೆ.

ನಿರ್ದೇಶಕರಾದ ಜಯಮ್ಮ, ಗೌರಮ್ಮ, ಸುಮತಾ (ಈಗಾಗಲೇ ವಜಾಗೊಂಡಿದ್ದಾರೆ), ಶಶಿಕಲಾ, ಜಯಮಾಲ, ಎಚ್.ಕೆ.ಆಶಾ ಹಾಗೂ ಪುಷ್ಪಲತಾ ಎಂಬುವವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಅಧ್ಯಕ್ಷೆ ಮತ್ತು ಸಿಇಒ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಗಳನ್ನು ಒಪ್ಪದ ಬ್ಯಾಂಕ್‌ನ ಇತರ ನಿರ್ದೇಶಕರು, ಬ್ಯಾಂಕ್ ಸ್ಥಾಪನೆ ಹಾಗೂ ಪ್ರಗತಿಗೆ ಅಧ್ಯಕ್ಷೆ ವಿಜಯಲಕ್ಷ್ಮಿ ಕೊಡುಗೆ ಸಾಕಷ್ಟಿದೆ. ರಾಜಕೀಯ ಹಾಗೂ ಪ್ರತಿಷ್ಠೆಯ ಕಾರಣಕ್ಕೆ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ರಾಜೀನಾಮೆ ನೀಡಿರುವ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಮಹಿಳೆಯರ ಅಭ್ಯುದಯಕ್ಕೆ ಮಾರ್ಗದರ್ಶನವಾಗಬೇಕಿದ್ದ ಈ ಬ್ಯಾಂಕ್ ನಿರ್ದೇಶಕ ಬಣ ರಾಜಕಾರಣದಿಂದ ಬಳಲುತ್ತಿರುವುದು ದುರಂತವೇ ಸರಿ.

24 ವರ್ಷಗಳಿಂದ ಕಪ್ಪುಚುಕ್ಕೆ ಇಲ್ಲದಂತೆ ಬ್ಯಾಂಕ್ ನಡೆಸಿಕೊಂಡು ಬರುತ್ತಿದ್ದೇನೆ. ತಾಲೂಕಿನ ಮಹಿಳೆಯರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ನಾನು ಕಟ್ಟಿ ಬೆಳೆಸಿದ ಬ್ಯಾಂಕ್ ಇದಾಗಿದೆ. ಕೆಲ ನಿರ್ದೇಶಕರಿಗೆ ಅಕ್ರಮಗಳಿಗೆ ಅವಕಾಶ ಸಿಗುತ್ತಿಲ್ಲ. ಈ ಕಾರಣದಿಂದ ಪಿತೂರಿ ನಡೆಸುತ್ತಿದ್ದಾರೆ. ಭಾನುವಾರ ನಡೆದ ಮಹಾಸಭೆಯಲ್ಲಿ ಓರ್ವ ನಿರ್ದೇಶಕಿಯನ್ನು ಸೂಕ್ತ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಹುದ್ದೆ ಹಾಗೂ ಸದಸ್ಯತ್ವದಿಂದ ವಜಾಗೊಳಿಸಿದ್ದೇವೆ. ಅವರ ಚಿತಾವಣೆಯಿಂದ ಕೆಲವರು ರಾಜೀನಾಮೆ ಸಲ್ಲಿಸಿರಬಹುದು. ಬ್ಯಾಂಕ್ ಅಭಿವೃದ್ಧಿಗೆ ಮಾರಕವಾಗಿದ್ದ ನಿರ್ದೇಶಕರು ರಾಜೀನಾಮೆ ನೀಡಿರುವುದು ಸಂತಸ ತಂದಿದೆ.

ವಿಜಯಲಕ್ಷ್ಮಿ ರಾಮಣ್ಣ, ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷೆ

ಬ್ಯಾಂಕ್‌ನ ಅಧ್ಯಕ್ಷೆ ಮತ್ತು ಸಿಇಒ ಇಬ್ಬರು ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಅವರು ಹೇಳಿದ್ದೇ ವೇದವಾಕ್ಯದಂತಾಗಿದೆ. ಬೈಲಾ ಹಾಗೂ ಸಹಕಾರ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೋರಂ ಇಲ್ಲದಿದ್ದರೂ ಸಭೆ ನಡೆಸಿ, ತಮ್ಮಿಷ್ಟ ಬಂದ ವಿಚಾರಗಳನ್ನು ಬರೆದುಕೊಳ್ಳುತ್ತಾರೆ. ಪ್ರಶ್ನಿಸುವ ನಿರ್ದೇಶಕರ ವಿರುದ್ಧ ಬೇಕಾಬಿಟ್ಟಿಯಾಗಿ ತೀರ್ಮಾನ ಕೈಗೊಳ್ಳುತ್ತಾರೆ. ಹಲವು ವರ್ಷಗಳಿಂದಲೂ ಇದೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ.

ಸುಮತಾ ಧನಂಜಯ, ರಾಜೀನಾಮೆ ನೀಡಿದ  ನಿರ್ದೇಶಕಿ