ಜಿಲ್ಲೆ

ರಾಮನಗರ, ಚನ್ನಪಟ್ಟಣದ ಕ್ಷೇತ್ರಕ್ಕೆ ಜೆಡಿಎಸ್‌ನಿಂದ 60 ಸಾವಿರ ಆಹಾರ ಕಿಟ್

ರಾಮನಗರ: ಜೆಡಿಎಸ್ ವತಿಯಿಂದ 60 ಸಾವಿರ ಆಹಾರ ಕಿಟ್‌ಗಳನ್ನು ಸಿದ್ಧಪಡಿಲಾಗುತ್ತಿದ್ದು, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ತಲಾ 30 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಶುಕ್ರವಾರದ ವೇಳೆಗೆ 10 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1ಕೆಜಿ ಬೇಳೆ, 2 ಕೆ.ಜಿ. ಈರುಳ್ಳಿ ಒಳಗೊಂಡಿರುವ ಆಹಾರದ ಕಿಟ್ ನೀಡಲಾಗುವುದು, ಮುಂದಿನ ದಿನಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ನೆರವು ನೀಡಲು ಶ್ರಮಿಸಲಾಗುವುದು ಎಂದರು.

ಕಳಪೆ ಕಿಟ್: ಕಳಪೆ ಗುಣಮಟ್ಟದ ಪಿಬಿ ಕಿಟ್‌ಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸರ್ವಪಕ್ಷಗಳ ಸಭೆಯಲ್ಲಿಯೇ ತಿಳಿಸಿದ್ದೆ. ಉತ್ತಮ ಮಟ್ಟದ ಕಿಟ್‌ಗಳನ್ನು ತರಿಸುವಂತೆ ಮೊದಲೇ ಸಲಹೆ ನೀಡಿದ್ದೆ. ಇಂದು ಕೇಂದ್ರದ ಐಸಿಎಂಆರ್ ಸಂಸ್ಥೆಯೇ ಕಿಟ್‌ಗಳು ಕಳಪೆ ಎಂದು ಹೇಳುತ್ತಿವೆ. ಸರ್ಕಾರದಲ್ಲಿ ಹಲವಾರು ಲೋಪ ದೋಷಗಳಿದ್ದು, ಮುಂದಿನ ದಿನಗಳಲ್ಲಾದರೂ ಇದನ್ನು ಸರಿಪಡಿಸಿಕೊಂಡು ಲೋಪಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಲಿ ಎಂದು ಎಚ್‌ಡಿಕೆ ಸಲಹೆ ನೀಡಿದರು.

ಗ್ರೀನ್ ಜೋನ್‌ನಲ್ಲಿರುವ ರಾಮನಗರಕ್ಕೆ ಪಾದರಾಯನಪುರದ ಗಲಭೆಕೋರರನ್ನು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಸಲಹೆ ನೀಡಿದವರ‌್ಯಾರು ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ. ಇಲ್ಲಿದ್ದವರನ್ನು ಪರಪ್ಪನ ಅಗ್ರಹಾರಕ್ಕೆ ಹಾಕಿ, ಅವರನ್ನು ಇಲ್ಲಿಗೆ ಕರೆ ತರುವ ಅಗತ್ಯ ಏನಿತ್ತು. ಒಂದು ವೇಳೆ ಅವರನ್ನು ಪ್ರತ್ಯೇಕವಾಗಿ ಇರಿಸಬೇಕು ಎನ್ನುವಂತಿದ್ದರೆ ಬೆಂಗಳೂರಿನಲ್ಲಿಯೇ ಸಾಕಷ್ಟು ಸರ್ಕಾರಿ ಕಟ್ಟಡಗಳಿವೆ. ಆದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ನಿರ್ಧಾರ ಮಾಡಿದ್ದಾರೆ. ಇವರಿಗೆ ಈ ಸಲಹೆ ನೀಡಿದವರು ಯಾರು? ಈ ರೀತಿಯ ಉದ್ದಟತನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಣ್ಣಿನ ಮಕ್ಕಳು ಅನ್ನೋದು ಜನತೆ ಕೊಟ್ಟ ಬಿರುದು: ತರಕಾರಿ ಕೊಟ್ಟು ಪ್ರಚಾರ ಪಡೆಯುತ್ತಿರುವವರಿಂದ ಬುದ್ದಿ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಕೋವಿಡ್ ಸಂದರ್ಭದಲ್ಲಿ ರೈತರಿಗೆ ಮಣ್ಣಿನ ಮಕ್ಕಳ ಕೊಡುಗೆ ಏನು ಎಂದು ನನ್ನ ಸ್ನೇಹಿತರೊಬ್ಬರು ಕೇಳಿದ್ದಾರೆ. ಆದರೆ ಈಗ ಅವರು ಮತ್ತು ಅವರ ನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಇದು ಟೀಕೆ ಮಾಡುವ ಸಮಯವಲ್ಲ, ಎಲ್ಲರೂ ಒಗ್ಗೂಡಿ ಜನರಿಗೆ ಸಹಾಯ ಮಾಡೋಣ. ಯಾರನ್ನೂ ಟೀಕೆ ಮಾಡಬಾರದು ಎನ್ನುವ ಕಾರಣಕ್ಕೆ ಸುಮ್ಮನಿದ್ದೇನೆ ಎಂದರು. ರೈತರು ಬೀದಿಗೆ ಬಂದಿದ್ದು, ಅದಕ್ಕಾಗಿ ತರಕಾರಿ ಖರೀದಿಸಿ ಜನರಿಗೆ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ. ಕೆ.ಜಿ.ಗೆ 2 ರೂ.ನಂತೆ 10 ಟನ್ ಟೊಮ್ಯಾಟೊ ಖರೀದಿಸಿದ್ದಾರೆ. 20 ಸಾವಿರ ರೂ ಖರ್ಚು ಮಾಡಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ನಾವು 5 ಕೋಟಿ ರೂ ಖರ್ಚು ಮಾಡಿ 60 ಸಾವಿರ ಮಂದಿಗೆ ಆಹಾರ ಕಿಟ್ ನೀಡುತ್ತಿದ್ದೇವೆ ಎಂದರು. ಮಣ್ಣಿನ ಮಕ್ಕಳು ಅನ್ನೊಂದು ನಾಡಿನ ಜನತೆ ನೀಡಿರುವ ಅಭಿಮಾನದ ಬಿರುದು. ಮಣ್ಣಿನ ಮಕ್ಕಳ ಕೆಲಸ ಮನೆಯಲ್ಲಿ ಮಲಗೋದಲ್ಲ, ನಾನು ಕಳೆದ 25 ದಿನಗಳಿಂದ ನಿರಂತರವಾಗಿ ಸರ್ಕಾರದ ಸಂಪರ್ಕದಲ್ಲಿದ್ದೇನೆ. ನಾನು ನೀಡಿದ ಸಲಹೆಗಳನ್ನು ಸರ್ಕಾರ ಜಾರಿಗೆ ತಂದಿಲ್ಲ, ಒಂದು ವೇಳೆ ನಾನು ಅಧಿಕಾರದಲ್ಲಿದ್ದರೆ ರೈತರಿಗಾಗಿ 5 ಸಾವಿರ ಕೋಟಿ ರೂ. ಪ್ಯಾಕೇಜ್ ೋಷಣೆ ಮಾಡುತ್ತಿದ್ದೆ ಎಂದರು.

ಮೃತ ಹನುಮಂತು ಮನೆಗೆ ಭೇಟಿ : ರಾಮನಗರದಲ್ಲಿ ಮಂಗಳವಾರ ಅಪಘಾತದಲ್ಲಿ ಸಾವಿಗೀಡಾಗಿದ್ದ ಖಾಸಗಿ ಸುದ್ದಿವಾಹಿನಿ ಜಿಲ್ಲಾ ವರದಿಗಾರ ಹನುಮಂತು ಕುಟುಂಬದವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಪಡುವನಗೆರೆ ಗ್ರಾಮದಲ್ಲಿರುವ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ 5 ಲಕ್ಷ ರೂ.ಗಳ ಚೆಕ್ ನೀಡಿ, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಅತ್ತೆ - ಮಾವನೊಂದಿಗೆ ಇದ್ದು ಚೆನ್ನಾಗಿ ನೋಡಿಕೊಳ್ಳುವ ಕೆಲಸ ನಿಮ್ಮದಾಗಿದೆ ಎಂದು ಹನುಮಂತು ಪತ್ನಿ ತಿಳಿಸಿದ ಎಚ್‌ಡಿಕೆ, ಹನುಮಂತು ಅಕಾಲಿಕ ಮರಣ ರಾಮನಗರ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕುಟುಂಬ ನಿರ್ವಹಣೆಗಾಗಿ ನನ್ನ ಮಗಳಿಗೆ ಯಾವುದಾದರೊಂದು ಕೆಲಸ ಕೊಡಿಸುವಂತೆ ಮೃತ ಹನುಮಂತು ಅತ್ತೆ ಮಾಡಿದ ಮನವಿಗೆ ಎಚ್‌ಡಿಕೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು.