ಜಿಲ್ಲೆ

ಅಂಗಾಂಶ ಬಾಳೆ ಹಗರಣದ ತನಿಖೆಗೆ ಪಟ್ಟು ತೋಟಗಾರಿಕೆ ಕಚೇರಿ ಎದುರು ರೈತರ ಪ್ರತಿಭಟನೆ

ಚನ್ನಪಟ್ಟಣ

ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ನಡೆದಿರುವ ಅಂಗಾಂಶ ಬಾಳೆ ಅನುದಾನ ಹಗರಣದ ತನಿಖೆ ನಡೆಸಬೇಕು ಹಾಗೂ ತಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ (ಸಮಾನ ಮನಸ್ಕರ ಸಹಭಾಗಿತ್ವ ಚನ್ನಪಟ್ಟಣ) ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರೈತ ಮುಖಂಡ ಸಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಹಲವು ಕಾರ್ಯಕರ್ತರು ಭಾಗವಹಿಸಿದ್ದರು. ನರೇಗಾ ಯೋಜನೆಯಲ್ಲಿ ಅಂಗಾಂಶ ಬಾಳೆ ಬೆಳೆಯುವ ರೈತರಿಗೆ ಸಹಾಯಧನ ನೀಡುವಲ್ಲಿ ನಡೆದಿರುವ ಗೋಲ್​ಮಾಲ್​ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪುಟ್ಟಸ್ವಾಮಿ, ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳು ಸೇರಿ ರೈತರ ಹೆಸರಿನಲ್ಲಿ ನಡೆಸಿರುವ ಅಕ್ರಮ, ಅವ್ಯವಹಾರ ಹಾಗೂ ಲೂಟಿ ಜಗಜ್ಜಾಹಿರಾಗಿದೆ. ಆದರೆ, ಇದುವರೆಗೂ ತಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದು ಅನುಮಾನಕ್ಕೆ ಎಡೆಮಾಡಿದೆ. ಇಲಾಖೆ ನಡೆಸಿದ ತನಿಖೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದ್ದರೂ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ, ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವರೇ ಎಂದು ಪ್ರಶ್ನಿಸಿದರು.

ಸಮಗ್ರ ತನಿಖೆ ನಡೆಸಿ

ತಾಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಅಂಗಾಂಶ ಬಾಳೆ ಬೆಳೆದಿರುವ ರೈತರ ಜಮೀನಿನುಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಉನ್ನತ ಮಟ್ಟದ ತಂಡ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಸಹಕಾರ ನೀಡಿರುವ ಹಿರಿಯ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದರು.

ರೈತಸಂಘದ ಮುಖಂಡರಾದ ಸೀಬನಹಳ್ಳಿ ಶಶಿಕುಮಾರ್​, ಹೊಂಬಾಳೇಗೌಡ, ಮೆಂಗಳ್ಳಿ ಮಹೇಶ್​, ಗೋರಾ ಶ್ರೀನಿವಾಸ್​, ದೇವಣ್ಣ, ಉಜ್ಜನಹಳ್ಳಿ ಮಲ್ಲಿಕಾರ್ಜುನ್​, ದೇವರಾಜು ಮುಂತಾದವರು ಉಪಸ್ಥಿತರಿದ್ದರು.

ಬಾಳೆ ಬೆಳೆಯದವರ ಹೆಸರಲ್ಲಿ ಅನುದಾನ ದುರ್ಬಳಕೆ

ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಜಾರಿಗೆ ತರುವ ಯೋಜನೆಗಳು ಕೆಳಹಂತದಲ್ಲಿ ಹಳ್ಳ ಹಿಡಿಯುತ್ತಿವೆ. ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಬಾಳೆ ಬೆಳೆಗೆ 8ರಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನ ಅರ್ಹರಿಗೆ ತಲುಪದೇ ದಲ್ಲಾಳಿಗಳು ಹಾಗೂ ಇಲಾಖೆಯ ಕೆಲ ಹಣಬಾಕರು ಒಂದಾಗಿ ಬಾಳೆ ಬೆಳೆಯದ ರೈತರ ಹೆಸರಿನಲ್ಲಿ ಅನುದಾನ ಪಡೆದು ಲಪಟಾಯಿಸಿದ್ದಾರೆ ಎಂದು ಪುಟ್ಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜಂಟಿ ನಿರ್ದೇಶಕರಿಗೆ ತರಾಟೆ

ಅಂಗಾಂಶ ಬಾಳೆಗೆ ಬಿಡುಗಡೆಯಾಗಿರುವ ನರೇಗಾ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ರೈತರು ಬಾಳೆ ಬೆಳೆಯದಿದ್ದರೂ ಅವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಹಣ ಪಡೆಯಲಾಗಿದೆ ಎಂದು ಇಲಾಖೆ ನಡೆಸಿದ ರ್ಯಾಂಡಮ್​ ತನಿಖೆಯಲ್ಲಿ ಸಾಬೀತಾಗಿದೆ. ಈ ವರದಿ ಇದ್ದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮೀನಮೇಷ ಏಕೆ ಎಂದು ಸ್ಥಳಕ್ಕೆ ಬಂದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಉನ್ನತ ತನಿಖೆ ಭರವಸೆ

ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಇಲಾಖೆ ಜಂಟಿ ನಿರ್ದೇಶಕ ವಿಶ್ವನಾಥ್​, ನಿಮ್ಮ ಮನವಿಯನ್ನು ಆಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ತಾಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ಪೈಕಿ ಶೇ.40ರಷ್ಟು ಕಾಮಗಾರಿಗಳ ತನಿಖೆ ನಡೆಸಲಾಗುವುದು. ಈ ತನಿಖೆಗೆ ಹೊರಜಿಲ್ಲೆಯ ಅಧಿಕಾರಿಗಳ ತಂಡವನ್ನು ನೇಮಿಸಲಾಗುವುದು. ತಂಡ ನೀಡುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರ್ಯಾಂಡಮ್​ ತನಿಖೆಯಲ್ಲಿ ಲೋಪ ಕಂಡುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.