ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಮುಂಬರುವ ಚುನಾವಣೆಯಲ್ಲಿ ಮಹಿಳಾ ಮತದಾರರ ಮನ ಗೆಲ್ಲಲು ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿಗೆ ಬಿದ್ದವರಂತೆ ವಿವಿಧ ಕಸರತ್ತು ಆರಂಭಿಸಿವೆ.
ಬೊಂಬೆನಾಡಿನ ಚುನಾವಣಾ ಕಣದಲ್ಲಿ ಪುರುಷ ಮತದಾರರಿಗಿಂತ ಒಂದು ಕೈ ಮೇಲಿರುವ ಮಹಿಳಾ ಮತದಾರರ ಮನ ಗೆಲ್ಲುವ ನಿಟ್ಟಿನಲ್ಲಿ ಎರಡು ಪಕ್ಷಗಳು ಬಳಸುತ್ತಿರುವ ಪ್ರಮುಖ ಅಸ್ತ್ರವೇ ಸ್ತ್ರೀಶಕ್ತಿ ಸಾಲಮನ್ನಾ. ಒಂದೆಡೆ ಕ್ಷೇತ್ರದಾದ್ಯಂತ ಸ್ವಾಭಿಮಾನದ ಸಂಕಲ್ಪ ನಡಿಗೆ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಕಳೆದ ಚುನಾವಣೆ ಸಮಯದಲ್ಲಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಸ್ತ್ರೀಶಕ್ತಿ ಸಾಲಮನ್ನಾ ಮಾಡುವ ಆಶ್ವಾಸನೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಸಿಲ್ಲ. ಕೊಟ್ಟ ಮಾತಿನಂತೆ ನಡೆಯದ ಅವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಎಂದು ಕರೆ ನೀಡುತ್ತಿದ್ದಾರೆ. ಈ ಮಧ್ಯೆ ಅವಕಾಶ ಸಿಕ್ಕಾಗೆಲ್ಲ ಸ್ತ್ರೀಶಕ್ತಿ ಸಾಲಮನ್ನಾ ಮಾಡಿಲ್ಲ ಎಂದು ಹೇಳುತ್ತ ಮಹಿಳಾ ಮತದಾರರನ್ನು ಎಚ್‌ಡಿಕೆ ವಿರುದ್ಧ ಹಣಿಯುವ ತಂತ್ರ ಸಿಪಿವೈ ಅವರದ್ದಾಗಿದೆ.
ಈ ಮಧ್ಯೆ ಯೋಗೇಶ್ವರ್ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಜೆಡಿಎಸ್ ಕೂಡ ಮಹಿಳಾ ಮತದಾರರು ಕೈಜಾರದಂತೆ ನೋಡಿಕೊಳ್ಳುವ ಕೆಲಸ ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಆಯೋಜಿಸಲಿರುವ ಮಹಿಳಾ ಸಮಾವೇಶಕ್ಕೆ ಆಹ್ವಾನಿಸುವ ನೆಪದಲ್ಲಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಉಮಾಶಂಕರ್ ನೇತೃತ್ವದ ತಂಡ ಗ್ರಾಮೀಣ ಪ್ರದೇಶದಲ್ಲಿ ಸುತ್ತು ಹಾಕುತ್ತಿದೆ. ಈ ತಂಡ, ಎಚ್‌ಡಿಕೆ ಅವರು ಘೋಷಿಸಿರುವ ಸ್ತ್ರೀಶಕ್ತಿ ಸಾಲಮನ್ನಾ ಬಗ್ಗೆ ಮನವರಿಕೆ ಮಾಡುತ್ತಿದೆ. ಅಲ್ಲದೇ ಈ ಹಿಂದೆ ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಸಾರಾಯಿ ಹಾಗೂ ಲಾಟರಿ ನಿಷೇಧದ ಬಗ್ಗೆಯೂ ತಿಳಿಸುತ್ತಿದ್ದಾರೆ. ಹಾಗೂ ಸ್ತ್ರೀ ಶಕ್ತಿ ಸಾಲಮನ್ನಾ ಸಾಧ್ಯವಾಗದಿರುವುದಕ್ಕೆ ಸಿಪಿವೈ ಕಾರಣ. ವಾಮ ಮಾರ್ಗದಿಂದ ಎಚ್‌ಡಿಕೆ ಸರ್ಕಾರ ಉರುಳಿಸಿದರು. ಇಲ್ಲದಿದ್ದರೆ ಇನ್ನಷ್ಟು ಮಹಿಳಾ ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದವು ಎಂದು ಯೋಗೇಶ್ವರ್‌ಗೆ ತಿರುಗೇಟು ನೀಡುತ್ತಿದ್ದಾರೆ.
ಸಿಪಿವೈಯಿಂದ ಸೀರೆ ಗ್‌ಟಿ!
ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸಿ.ಪಿ.ಯೋಗೇಶ್ವರ್ ಯುಗಾದಿ ನೆಪದಲ್ಲಿ ಮಹಿಳಾ ಮತದಾರರಿಗೆ ಸೀರೆ ಗ್‌ಟಿ ನೀಡುವ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ಕೊಡಿಸಿದ್ದಾರೆ. ಸೀರೆಗಳ ಮೇಲೆ ಯುಗಾದಿ ಹಬ್ಬದ ಶುಭಾಶಯದ ಜತೆಗೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಸ್ಟಿಕ್ಕರ್ ಅಂಟಿಸಲಾಗಿದೆ. ಸೀರೆ ಗ್‌ಟಿ ಕಾರ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಬೊಂಬೆನಾಡಿನ ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಅವರ ಪತ್ನಿ ಶೀಲಾ ಸಾಥ್ ನೀಡುತ್ತಿದ್ದಾರೆ. ಯೋಗೇಶ್ವರ್ ಜನ ಸಂಕಲ್ಪ ನಡಿಗೆಯಲ್ಲಿ ಸಕ್ರಿಯವಾಗಿರುವ ಶೀಲಾ ಗ್ರಾಮೀಣ ಮಹಿಳಾ ಮತದಾರರನ್ನು ಸೆಳೆಯಲು ಯತ್ನ ಮಾಡುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆಯುವ ಮೂಲಕ ಪತಿಗೆ ಬಲ ತುಂಬುಕ ಕಾಯಕದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್‌ಗೂ ಮಹಿಳೆಯರೇ ಟಾರ್ಗೆಟ್
ಜೆಡಿಎಸ್ ಮತ್ತು ಬಿಜೆಪಿಯಲ್ಲದೇ ಕಾಂಗ್ರೆಸ್ ಕೂಡ ಮಹಿಳಾ ಮತದಾರರನ್ನೇ ಗುರಿ ಮಾಡಿದೆ. ಪಕ್ಷದ ಸಂಭವನೀಯ ಅಭ್ಯರ್ಥಿ ಎನ್ನಲಾದ ಪ್ರಸನ್ನ ಪಿ.ಗೌಡ ಈಗಾಗಲೇ ಕ್ಷೇತ್ರದಲ್ಲಿ ಆರಂಭಿಸಿರುವ ಧಾರ್ಮಿಕ ಕ್ಷೇತ್ರಗಳ ಯಾತ್ರೆ ಆರಂಭಗೊಂಡಿರುವುದು ಇದಕ್ಕೆ ನಿದರ್ಶನವಾಗಿದೆ. ಒಟ್ಟಾರೆ, ಬೊಂಬೆನಾಡಿನ ಕಣದಲ್ಲಿ ಪಾರಮ್ಯ ಮೆರೆದಿರುವ ಮಹಿಳಾ ಮತದಾರರು ಮುಂಬರುವ ಚುನಾವಣೆಯಲ್ಲಿ ಯಾರತ್ತ ಚಿತ್ತ ಹರಿಸುತ್ತಾರೋ ಕಾದು ನೋಡಬೇಕಿದೆ.