ಜಿಲ್ಲೆ

ಹಳೇ ದ್ವೇಷಕ್ಕೆ ಗಾರೆ ಮೇಸ್ತ್ರಿ ಕೊಲೆ

 ಚನ್ನಪಟ್ಟಣ
ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವಕನೊರ್ವನ ತಲೆ ಮೇಲೆ ಕಲ್ಲು ಎತ್ತಿಹಾಕಿ‌ ಕೊಲೆ ಮಾಡಿರುವ ಘಟನೆ ಚನ್ನಪಟ್ಟಭ ನಗರದ ಲಾಳಘಟ್ಟ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.
ನಗರದ ಅಂಬೇಡ್ಕರ್ ನಗರದ ಜನತಾ ಕಾಲೋನಿಯ ನಿವಾಸಿ ಪ್ರಸಾದ್ (33) ಕೊಲೆಯಾಗಿರುವ ಯುವಕ. ಇದೇ ಕಾಲೋನಿಯ ನಿವಾಸಿಗಳಾದ ವಿಜಯ್ ಕುಮಾರ್, ಸುದಾಕರ್ ಹಾಗೂ ಸಿದ್ದಪ್ಪಾಜಿ ಕೊಲೆ ಮಾಡಿರುವ ಆರೋಪಿಗಳು. ಶನಿವಾರ ರಾತ್ರಿ 12 ಸಮಯದಲ್ಲಿ ಲಾಳಘಟ್ಟ ಕ್ರಾಸ್ ಬಳಿ ನಿಂತಿದ್ದ ಪ್ರಸಾದ್ ನನ್ನು ಹಳೆಯ ವೈಯುಕ್ತಿಕ ದ್ವೇಷದಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿರುವ ಆರೋಪಿಗಳು, ಮೊದಲು ಕುಡುಗೋಲಿನ ಮೂಲಕ‌ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವಗೊಂಡಿದ್ದ ಪ್ರಸಾದ್ ನನ್ನು ನೆಲಕ್ಕೆ ಬೀಳಿಸಿ ಹಾಲೋಬಾಕ್ಸ್ ಇಟ್ಟಿಗೆಯನ್ನು ತಲೆಮೇಲೆ ಹಾಕಿ ಕೊಲೆ ಮಾಡಲಾಗಿದೆ.
ವೃತ್ತಿಯಲ್ಲಿ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಮೃತ ಪ್ರಸಾದ್ ಹಾಗೂ ಕೊಲೆ ಆರೋಪಿಗಳ ಮಧ್ಯೆ ಈ ಹಿಂದೆ ಗಣೇಶ ಹಬ್ಬದಂದು ಗಲಾಟೆ ನಡೆದಿತ್ತು. ಈ ಮಧ್ಯೆ ಪದೆ ಪದೇ ಈ ಮೂವರು ನನ್ನ ಮಗನ ಮೇಲೆ ಗಲಾಟೆ ನಡೆಸುತ್ತಿದ್ದರು. ಒಳ ಸಂಚು ಮಾಡಿ ಹಾಗೂ ಸಮಯ ನೋಡಿ ನನ್ನ ಮಗನನ್ನು ಈ‌ ಮೂವರು ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ  ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ಮೂವರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.