ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರು ನಗರದ ಅಕ್ಕಪಕ್ಕ ಇರುವ ಕೆರೆಗಳ ಒಡಲು ಸೇರುತ್ತಿದೆ. ಇದರಿಂದಾಗಿ ಕೆರೆಯಂಗಳಗಳು ಸಂಪೂರ್ಣ ಕಲುಷಿತಗೊಂಡಿದ್ದು, ಗಬ್ಬೆದ್ದು ನಾರುತ್ತಿವೆೆ. ಜಲಚರಗಳು ಹಾಗೂ ಜನತೆಗೆ ರೋಗರುಜಿನಗಳು ಸಾಮಾನ್ಯ ಎನಿಸಿವೆ.
ನಗರದ ಕಲುಷಿತ ನೀರು ಸ್ವಚ್ಛಂದವಾಗಿ ಕೆರೆಗಳನ್ನು ಹಾಳು ಮಾಡುತ್ತಿರುವುದು ಇಂದಿನ ಸಮಸ್ಯೆಯಲ್ಲ. ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದ ಕಾರಣ, ಹಲವಾರು ವರ್ಷಗಳಿಂದ ನಗರದ ಮನೆಗಳ ಶೌಚದ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ಈ ಮಲಿನ ನೀರು ನಗರದ ಅಕ್ಕಪಕ್ಕವೇ ರಾಮಮ್ಮನಕೆರೆ, ಶೆಟ್ಟಿಹಳ್ಳಿ ಕೆರೆ ಹಾಗೂ ಕೂಡ್ಲೂರು ಕೆರೆಯನ್ನು ಸೇರುತ್ತಿದೆ. ಕೇವಲ ಶೌಚದ ನೀರಷ್ಟೇ ಅಲ್ಲದೇ, ಆಸ್ಪತ್ರೆಗಳ ಮಲಿನ ಹಾಗೂ ಕೆಲ ಸಣ್ಣಪುಟ್ಟ ಕಾರ್ಖಾನೆಗಳ ವಿಷಯುಕ್ತ ನೀರು ಸಹ ಕೆರೆಗಳ ಒಡಲು ಸೇರುತ್ತಿದೆ. ಇದರಿಂದಾಗಿ ನಿರ್ಮಲವಾದ ಕೆರೆಯ ನೀರು ಸಹ ವಿಷವರ್ತುಲವಾಗಿ ಬದಲಾಗಿದೆ.
ಹೈಕೋರ್ಟ್ ಸಹ ಚಾಟಿ ಬೀಸಿತ್ತು!
ನಗರದ ಮಲಿನ ನೀರು ಕೆರೆಗಳನ್ನು ಸೇರುತ್ತಿರುವ ಬಗ್ಗೆ ನಗರದ ನಿವಾಸಿಯೊಬ್ಬರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ನಗರದ ಚಂದ್ರಶೇಖರ್ ಎಂಬುವವರು ಈ ವಿಚಾರದ ಬಗ್ಗೆ ನ್ಯಾಯಾಲಯದ ಗಮನಸೆಳೆದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ನಗರಸಭೆಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿತ್ತು.
ಯುಜಿಡಿ ಸಮಸ್ಯೆಯ ನೆಪ ಹೇಳಿದ್ದ ನಗರಸಭೆಗೆ ಚಾಟಿ ಬೀಸಿದ್ದ ನ್ಯಾಯಾಲಯ, ಯುಜಿಡಿ ಆಗುವವರೆಗೆ ಯಾವುದಾದರೂ ಟೆಕ್ನಾಲಜಿ ಬಳಸಿ, ಕಲುಷಿತ ನೀರನ್ನು ಶುದ್ಧೀಕರಣ ಮಾಡಿ ತದನಂತರ, ಕೆರೆಗೆ ಬಿಡುವಂತೆ ನಿರ್ದೇಶನ ನೀಡಿತ್ತು. ಅದರಂತೆ ನಗರಸಭೆ ನ್ಯಾನೋ ಟೆಕ್ನಾಲಜಿ ಬಳಸಿ ಕೆಲ ತಿಂಗಳು ಅದರ ನಿರ್ವಹಣೆಯನ್ನು ಸಹ ಮಾಡಿತ್ತು. ಆದರೆ, ಪ್ರಸುತ್ತ ಅದು ಸಹ ಸ್ಥಗಿತಗೊಂಡಿದೆ. ಇತ್ತೀಚೆಗೆ ಕೆರೆಗೆ ಸೇರುತ್ತಿರುವ ಮಲಿನ ನೀರಿನ ಪ್ರಮಾಣವೂ ಹೆಚ್ಚಳಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಜಲಚರಗಳ ಮಾರಣ ಹೋಮ!
ಮಲಿನ ನೀರಿನಿಂದಾಗಿ ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಗಬ್ಬೆದ್ದು ನಾರುತ್ತಿದೆ. ಉಳಿದ ಕೆರೆಗಳದೂ ಇದೇ ಸಮಸ್ಯೆಯಾಗಿದೆ. ನಗರದ ಹೃದಯಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆಯಂತೂ ಶೌಚದ ಕಟ್ಟೆಯಂತಾಗಿದೆ. ಇದರಿಂದಾಗಿ ಈ ಕೆರೆಗಳಲ್ಲಿನ ಜಲಚರಗಳ ಮಾರಣಹೋಮವೂ ನಡೆಯುತ್ತಿದೆ. ವಿಷಪೂರಿತ ನೀರು ಕೆರೆ ಸೇರುತ್ತಿರುವ ಕಾರಣ ಮೀನು ಸಾಕಾಣಿಕೆಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಮಲಿನ ನೀರು ಸೇರುತ್ತಿರುವ ಕೆರೆಗಳಲ್ಲಿ ಮೀನುಗಳು ನಿರಂತರವಾಗಿ ಸಾಯುತ್ತಿವೆ. ಇದರೊಂದಿಗೆ ಕೆರೆಯ ಬಯಲಿನ ಪ್ರದೇಶದಲ್ಲಿ ಕೆರೆಯ ನೀರು ಬಳಸುವ ರೈತರಿಗೂ ಸಮಸ್ಯೆ ಕಾಡುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾಗಿದೆ. ಇಲ್ಲವಾದರೆ, ಈ ಕೆರೆಗಳಿಂದ ಹಲವಾರು ಸಮಸ್ಯೆಗಳು ಕಟ್ಟಿಟ್ಟಬುತ್ತಿಯಾಗಿದೆ.