ಜಿಲ್ಲೆ

ಸಮಾಜ ಹಿತ ಬಯಸುವವರ ಸಂಖ್ಯೆ ಹೆಚ್ಚಬೇಕು ಬಿಇಒ ಮರೀಗೌಡ ಅಭಿಮತ

ಗಂಗಾಧರ ಬಿ ವಿ

ಸ್ತನ, ಗರ್ಭಕಂಠ ಕ್ಯಾನ್ಸರ್​ ತಪಾಸಣೆ, ಅರಿವು ಕಾರ್ಯಕ್ರಮ

ಸಮಾಜ ಹಾಗೂ ಪ್ರತಿಯೊಬ್ಬರ ಹಿತ ಬಯಸುವ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು ಎಂದು  ಕ್ಷೇತ್ರ  ಶಿಕ್ಷಣಾಧಿಕಾರಿ ಬಿ.ಎನ್​. ಮರೀಗೌಡ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ಲಯನ್ಸ್​ ಸಂಸ್ಥೆ, ಭಾರತ್​ ವಿಕಾಸ್​ ಪರಿಷತ್​, ಚಂದ್ರು ಡಯಾಗ್ನೋಸ್ಟಿಕ್​ ಸೆಂಟರ್​ ಹಾಗೂ ಬೆಂಗಳೂರಿನ ಫೋರ್ಟಿಸ್​ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ತನ ಕ್ಯಾನ್ಸರ್​ ಮತ್ತು ಗರ್ಭಕಂಠ ಕ್ಯಾನ್ಸರ್​ ತಪಾಸಣೆ ಮತ್ತು ಮಾಹಿತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ತಾಲೂಕಿನ ಶಿಕ್ಷಕಿಯರಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಶಿಣ ಇಲಾಖೆಯ ಹಲವಾರು ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಶಿಕಿಯರ ಆರೋಗ್ಯದ ಬಗ್ಗೆ ಕಾಳಜಿಯಿಟ್ಟು ಈ ಕಾರ್ಯಕ್ರಮ ರೂಪಿಸಿರುವುದಕ್ಕೆ ಇಲಾಖೆ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಲಯನ್ಸ್​ ಸಂಸ್ಥೆ ಕಾರ್ಯದರ್ಶಿ ವಿ.ಸಿ.ಚಂದ್ರೇಗೌಡ ಮಾತನಾಡಿ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್​ ಮತ್ತು ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಅರಿವು ಮೂಡಿಸಬೇಕು ಹಾಗೂ ತಪಾಸಣೆ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.

ಅಸಡ್ಡೆ ಬೇಡ, ಎಚ್ಚರ!
ವೈದ್ಯ ಡಾ.ವಿವೇಕ್​ ಬೆಳ್ಳಂದೂರ್​ ಮಾತನಾಡಿ, ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್​ ಹಾಗೂ ಗರ್ಭಕಂಠ ಕ್ಯಾನ್ಸರ್​ ಕೂಡ ಒಂದು. ಪ್ರಸ್ತುತ ಈ ಸಮಸ್ಯೆಗಳಿಂದ ಮಹಿಳೆಯರು ಬಳಲುತ್ತಿದ್ದಾರೆ. ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆ ಗರ್ಭ ಗೊರಳಿನ (ಸರ್ವೈಕಲ್​) ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆಯನ್ನೂ ಮೀರಿರುವುದು ಆತಂಕಕಾರಿಯಾಗಿದೆ.

ಕಿರಿಯ ವಯಸ್ಸಿನಲ್ಲಿ ಸ್ತನದ ಕ್ಯಾನ್ಸರ್​ ಹೆಚ್ಚಾಗಿ ಕಂಡುಬರುತ್ತಿದ್ದು, ರೋಗದ ಬಗ್ಗೆ ಅರಿವು ಇಲ್ಲದಿರುವುದು, ಆರೋಗ್ಯದ ಕುರಿತು ಅಸಡ್ಡೆ, ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳದೇ ಇರುವುದು ಮತ್ತು ಗೊತ್ತಿದ್ದರೂ ಕುಟುಂಬದ ಜವಾಬ್ದಾರಿಗಳ ನಡುವೆ ಆರೋಗ್ಯದ ಕಾಳಜಿ ಮಾಡದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.

ಸ್ತನದ ಅಂಗಾಂಶದ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್​ ನಂತರ ಹತ್ತಿರದ ಅಂಗಾಂಶಗಳು ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಹಾರ್ಮೋನ್​ಗಳ ಏರುಪೇರು, ಜೀವನಶೈಲಿ, ಬೊಜ್ಜು, ಅನುವಂಶೀಯ ಮತ್ತು ಪರಿಸರದ ಅಂಶಗಳು ಸ್ತನದ ಕ್ಯಾನ್ಸರ್​ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಈ ಕಾಯಿಲೆಗಳ ಬಗ್ಗೆ ಅಸಡ್ಡೆ ತೋರದೆ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದರು.

ಭಾವಿಪ ಅಧ್ಯ ಪಿ.ಗುರುಮಾದಯ್ಯ, ಲಯನ್ಸ್​ ಸಂಸ್ಥೆ ಅಧ್ಯ ತಿಪ್ರೇಗೌಡ, ಭಾವಿಪ ಪ್ರಾಂತ್ಯ ಉಪಾಧ್ಯ ವಸಂತಕುಮಾರ್​, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ವೈದ್ಯೆ ಡಾ. ಪ್ರೀತಿಗೌಡ ಉಪಸ್ಥಿತರಿದ್ದರು.