ಚನ್ನಪಟ್ಟಣ
ತಾಲೂಕಿನಲ್ಲಿ ಫೆ.27 ರಂದು ಹಮ್ಮಿಕೊಂಡಿರುವ ಬೊಂಬೆನಾಡಿನ ಬಮುಲ್ ಉತ್ಸವ ಬೆಂಗಳೂರು ಹಾಲು ಒಕ್ಕೂಟದ ಅಧಿಕೃತ ಕಾರ್ಯಕ್ರಮ ಅಲ್ಲ. ಅದೊಂದು ಜೆಡಿಎಸ್ ಪ್ರಚಾರ ಸಭೆ ಎಂದು ಬಮುಲ್ ನಾಮ ನಿರ್ದೇಶಿತ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಆರೋಪಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಮುಲ್ ನಿರ್ದೇಶಕ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಜಯಮುತ್ತುರವರು ತಾಲೂಕಿನಲ್ಲಿ ಫೆ.27ರಂದು ಬಮುಲ್ ಉತ್ಸವ ಆಯೋಜಿಸಿದ್ದಾರೆ. ಇದು ನಮ್ಮ ಒಕ್ಕೂಟದ ಅಧಿಕೃತ ಕಾರ್ಯಕ್ರಮವಲ್ಲ. ಇದೊಂದು ಜೆಡಿಎಸ್ ಪಕ್ಷವನ್ನು ಪ್ರಮೋಟ್ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಜೆಡಿಎಸ್ ಪಕ್ಷದ ಪ್ರಚಾರ ಸಭೆ. ಈ ಕಾರ್ಯಕ್ರಮಕ್ಕೂ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಜಯಮುತ್ತು ಬಮುಲ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ಇದು ಒಕ್ಕೂಟದ ಕಾರ್ಯಕ್ರಮವಲ್ಲ. ಜೊತೆಗೆ ಬಮುಲ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹಾಗೂ ಒಕ್ಕೂಟದಿಂದ ಯಾವುದೆ ಆರ್ಥಿಕ ವೆಚ್ಚ ಭರಿಸದಂತೆ ಈಗಾಗಲೇ ಸಹಕಾರ ಇಲಾಖೆಯ ಜಂಟಿ ನಿಬಂಧಕರ ಸೂಚನೆಯ ಮೇರೆಗೆ ಆದೇಶ ಹೊರಡಿಸಲಾಗಿದೆ. ಹೀಗಾಗಿ, ಇದು ಒಕ್ಕೂಟದ ಅಧಿಕೃತ ಕಾರ್ಯಕ್ರಮವಲ್ಲದ ಕಾರಣ ಬಮುಲ್ ಹೆಸರನ್ನಾಗಲಿ ಅಥವಾ ಲಾಂಛನವನ್ನಾಗಲಿ ಕಾರ್ಯಕ್ರಮದಲ್ಲಿ ಬಳಸುವಂತಿಲ್ಲ. ಜೊತೆಗೆ ತಾಲೂಕಿನ ತಾಲೂಕಿನ ಯಾವುದೇ ಎಂಪಿಸಿಎಸ್ ಗಳು ಕಾರ್ಯಕ್ರಮಕ್ಕೆ ಯಾವುದೇ ವೆಚ್ಚವನ್ನು ಭರಿಸುವಂತಿಲ್ಲ. ಎಂಪಿಸಿಎಸ್ ನೌಕರರು ಸೇರಿದಂತೆ ಯಾರಾದರೂ ಒಕ್ಕೂಟದ ಆದೇಶ ಮೀರಿ ಯಾರಾದರೂ ನಡೆದುಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉತ್ಸವದ ಹೆಸರಿನಲ್ಲಿ ಜಯಮುತ್ತು ತಮ್ಮ ಮನಸೋ ಇಚ್ಛೆ ಕಾರ್ಯಕ್ರಮ ಆಯೋಜಿಸಲು ಹೊರಟಿದ್ದಾರೆ. ಪ್ರೋಟೋಕಾಲ್ ನಿರ್ವಹಣೆ ಮಾಡದೇ ಕೇವಲ ಒಂದು ಪಕ್ಷದ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಕಾರ್ಯಕ್ರಮಕ್ಕಾಗಿ ಪ್ಲೆಕ್ಸ್ ಗೆ ಒಂದು ಸಂಘದಿಂದ ಎರಡು ಸಾವಿರ ಹಾಗೂ ೧೦ರಿಂದ ೧೫ ಸಾವಿರ ಹಣ ಖರ್ಚು ಮಾಡಿ ಕಾರ್ಯಕ್ರಮಕ್ಕೆ ಜನರನ್ನು ಕರೆತರುವಂತೆ ಎಂಪಿಸಿಎಸ್ ಕಾರ್ಯ ನಿರ್ವಾಹಕರಿಗೆ ಒತ್ತಡ ಹಾಕುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನಮ್ಮ ಎಂಪಿಸಿಎಸ್ ಗಳ ಅಧ್ಯಕ್ಷರು ಮತ್ತು ಸಿಇಒಗಳಿಗೆ ಸಾಕಷ್ಟು ಒತ್ತಡ ಮಾಡುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ನಗರಾಧ್ಯಕ್ಷ ಆರ್.ಶಿವಕುಮಾರ್, ಬಿಜೆಪಿ ಮುಖಂಡರಾದ ಸಿಂಗರಾಜಿಪುರ ರಾಜಣ್ಣ, ವಿ.ಬಿ.ಚಂದ್ರಯ್ಯ, ತಗಚಗೆರೆ ಕುಳ್ಳಪ್ಪ, ನಗರಸಭೆ ನಾಮಿನಿ ಸದಸ್ಯರಾದ ಕೋಟೆ ಸ್ವಾಮಿ, ಸಂತೋಷ್ ಉಪಸ್ಥಿತರಿದ್ದರು.