ನಿತ್ಯ ಕಲುಷಿತ ನೀರು ಎತ್ತಿಹಾಕುವ ಕಾಯಕ
ಪ್ರತಿ ಮನೆ ಎದುರೂ ಕಿರು ಶೌಚಗುಂಡಿ, ಚರಂಡಿಯೇ ಇಲ್ಲ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಪ್ರತಿ ಮನೆಯ ಮುಂದೆ ಕಿರು ಶೌಚಗುಂಡಿಗಳು, ಬೆಳಗಾದರೆ ಸಾಕು ಕಲುಷಿತ ನೀರನ್ನು ಗೋರುವ ಕಾಯಕ, ಒಂದು ಲೋಟ ನೀರು ಬಳಸಲೂ ಯೋಚಿಸಬೇಕಾದ ಸ್ಥಿತಿ, ಚರಂಡಿ ನೀರಲ್ಲೇ ಕಂದಮ್ಮಗಳ ಆಟ, ಊಟ. ಇದು ನಾಗರಿಕ ಸಮಾಜವೇ ನಾಚಿಕೆಪಡುವಂತೆ ಜೀವನ ಸಾಗಿಸುತ್ತಿರುವ ನಗರದ ಆನಂದಪುರ ಬಡಾವಣೆ ನಿವಾಸಿಗಳ ದುಸ್ಥಿತಿ.
ನಗರದ ತಾಲೂಕು ಕಚೇರಿಯ ಅನತಿ ದೂರದಲ್ಲೇ ಇರುವ ಆನಂದಪುರದ 1ನೇ ಅಡ್ಡರಸ್ತೆಯ ನಿವಾಸಿಗಳ ಸ್ಥಿತಿ ಹೇಳತೀರದಾಗಿದೆ. ಹಲವು ದಶಕಗಳು ಕಳೆದರೂ ಇಲ್ಲಿನ ಜನತೆಯದು ಶೋಚನೀಯ ಬದುಕು. ಮನೆಯ ಕೊಳಚೆ ನೀರನ್ನು ಮನೆಯವರೇ ಎತ್ತಿ ಬಹುದೂರ ಹೋಗಿ ಸುರಿದು ಬರುವ ಅನಿವಾರ್ಯತೆಯಿದೆ. ಆಳುವ ಜನರ ನಿರ್ಲಕ್ಷ್ಯ ಹಾಗೂ ತಾತ್ಸಾರದಿಂದಾಗಿ ಬಡಾವಣೆ ನಿವಾಸಿಗಳು ಬದುಕು ಸವೆಸುತ್ತಿದ್ದಾರೆ.
ನಗರಸಭೆಯ 39ನೇ ವಾರ್ಡ್‌ಗೆ ಸೇರುವ ಆನಂದಪುರ 1ನೇ ಅಡ್ಡರಸ್ತೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ತಮಿಳು ಹಾಗೂ ಮುಸ್ಲಿಂ ಸಮುದಾಯ ಸೇರಿ 300ಕ್ಕೂ ಹೆಚ್ಚು ಮಂದಿ ಇದ್ದಾರೆ. ಸಣ್ಣ ಗೂಡು ಕಟ್ಟಿಕೊಂಡು ಜೀವನದ ಬಂಡಿ ಸಾಗಿಸುತ್ತಿರುವ ಈ ಬಡಾವಣೆಯ ನಿವಾಸಿಗಳಿಗೆ ಕನಿಷ್ಠ ಮೂಲಸವಲತ್ತುಗಳು ಮರೀಚಿಕೆಯಾಗಿವೆ. ರಸ್ತೆ, ಚರಂಡಿ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೇರೆ ಸವಲತ್ತುಗಳಿರಲಿ, ಕೊನೇ ಪಕ್ಷ ಅವರ ಮನೆಗಳ ಗಲೀಜು ನೀರು ಹರಿದು ಹೋಗಲು ದಾರಿ ಇಲ್ಲದಂತಾಗಿದೆ. ಇನ್ನು ಈ ಬಡಾವಣೆಗೆ ದಾರಿ ಎಲ್ಲಿದೆ ಎಂಬುದನ್ನು ಹುಡುಕಬೇಕಾಗಿದೆ.
ಪ್ರತಿಮನೆ ಮುಂದೆ ಕಿರು ಶೌಚಗುಂಡಿ!
ರಸ್ತೆಯಲ್ಲಿ ಈ ಹಿಂದೆ ಚರಂಡಿ ವ್ಯವಸ್ಥೆ ಇತ್ತು. ಇಲ್ಲಿನ ಮನೆಗಳ ಚರಂಡಿ ನೀರು ಪಕ್ಕದ ಖಾಸಗಿ ಜಾಗದಲ್ಲಿ ಹರಿದುಹೋಗುತ್ತಿತ್ತು. ಆದರೆ, ಕಳೆದ ಐದಾರು ವರ್ಷಗಳ ಹಿಂದೆ ಜಾಗದ ಮಾಲೀಕರು ಹದ್ದುಬಸ್ತು ಮಾಡಿಕೊಂಡ ಕಾರಣ, ಈ ರಸ್ತೆಯ ನಿವಾಸಿಗಳಿಗೆ ಚರಂಡಿಯೇ ಇಲ್ಲವಾಗಿದೆ. ಹಾಗಾಗಿ ಈ ರಸ್ತೆಯ ಪ್ರತಿ ಮನೆಯ ಎದುರು ಕಿರು ಶೌಚಗುಂಡಿಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಸ್ನಾನ ಮಾಡುವ, ಪಾತ್ರೆ ತೊಳೆದ, ಬಟ್ಟೆ ಒಗೆದ ನೀರು ಈ ಗುಂಡಿಯಲ್ಲಿ ಶೇಖರಣೆಯಾಗುತ್ತದೆ. ಇದನ್ನು ಪ್ರತಿನಿತ್ಯ ಬಕೆಟ್‌ನಲ್ಲಿ ತುಂಬಿಕೊಂಡು ಪಕ್ಕದ ರಸ್ತೆಯಲ್ಲಿರುವ ಚರಂಡಿಗೆ ಸುರಿಯುತ್ತಿದ್ದಾರೆ. ಇನ್ನು ಕೆಲವೆಡೆ ರಸ್ತೆಯೇ ಬಯಲು ಚರಂಡಿಯಾಗಿದೆ. ಈ ಪ್ರದೇಶದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಂಬಂಧಪಟ್ಟವರ ಬೇಜವಾಬ್ದಾರಿತನದಿಂದ ಇಲ್ಲಿನ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾಜಿ ಸಿಎಂ ಸ್ವಕ್ಷೇತ್ರದ ಸ್ಥಿತಿ ಇದು!
ಕ್ಷೇತ್ರವನ್ನು ಎರಡನೇ ಬಾರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದು, ಸ್ವಕ್ಷೇತ್ರ ಅದೂ ನಗರ ಪ್ರದೇಶದಲ್ಲಿಯೇ ಈ ರೀತಿ ಜನರು ಸಮಸ್ಯೆ ಎದುರಿಸುತ್ತಿರುವುದು ವಿಪರ್ಯಾಸ ಎನ್ನಬಹುದಾಗಿದೆ. ಸಮಸ್ಯೆಯನ್ನು ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬಡಾವಣೆ ನಿವಾಸಿಗಳು. ಇನ್ನಾದರೂ ನಗರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾತನೆಯ ಬದುಕು ಸಾಗಿಸುತ್ತಿರುವ ಆನಂದಪುರ ಬಡಾವಣೆ ನಿವಾಸಿಗಳ ಬಾಳಲ್ಲಿ ಆನಂದ ತರಬೇಕಾಗಿದೆ.
ಇಲ್ಲಿ ಯಾರಾದರೂ ಸತ್ತರೆ ಹೆಣಕ್ಕೆ ಸ್ನಾನ ಮಾಡಿಸಲು ಹಿಂದೆ ಮುಂದೆ ನೋಡಬೇಕಿದೆ. ನಮ್ಮ ನತದೃಷ್ಟ ಬದುಕು ಯಾರಿಗೂ ಬೇಡ. ಹಲವಾರು ವರ್ಷಗಳಿಂದ ಯಾರು ನಮ್ಮ ಗೋಳು ಕೇಳುತ್ತಿಲ್ಲ. ಮನೆಯಲ್ಲಿ ಒಂದು ಲೋಟ ನೀರು ಬಳಸಲು ಯೋಚಿಸಬೇಕಿದೆ. ನೀರು ಎತ್ತಬೇಕು ಎಂಬ ಕಾರಣಕ್ಕೆ ಅಪರೂಪಕ್ಕೆ ಸ್ನಾನ ಮಾಡುತ್ತೇವೆ.
ನರಸಮ್ಮ, ಆನಂದಪುರ ನಿವಾಸಿ
ಗುಂಡಿಯಲ್ಲಿ ತುಂಬಿದ ನೀರು ಎತ್ತಿಹಾಕುವುದು ನಮ್ಮ ನಿತ್ಯದ ಕಾಯಕ. ಚರಂಡಿ ನೀರಿನಲ್ಲಿಯೇ ಮಕ್ಕಳು, ನಾವು ಕಾಲ ಕಳೆಯಬೇಕಾಗಿದೆ. ಇದರಿಂದ ಮಕ್ಕಳು ಸೇರಿ ವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೂಲಿ ಮಾಡುವ ಹಣ ಆಸ್ಪತ್ರೆಗೆ ಖರ್ಚಾಗುತ್ತದೆ. ದಯವಿಟ್ಟು ಸಂಬಂಧಪಟ್ಟವರು ಕಷ್ಟ ಪರಿಹರಿಸಿಕೊಡಿ.
ಅಮಲ, ಸ್ಥಳೀಯ ನಿವಾಸಿ
ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರಿಗೆ ಈ ಬಗ್ಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಶಾಸಕರಿಗೂ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗಿದೆ. ಅವರೂ ಗಮನಹರಿಸಿಲ್ಲ. ನಮ್ಮ ವಾರ್ಡ್ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ತೋರಲಾಗಿದೆ. ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ.
ಭಾನುಪ್ರಿಯ, ನಗರಸಭೆ 29ನೇ ವಾರ್ಡ್ ಸದಸ್ಯೆ, ಚನ್ನಪಟ್ಟಣ