ಜಿಲ್ಲೆ

ಪಿ.ನಾಗರಾಜು ಬಿಜೆಪಿಗೆ?ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ? ಹೆಚ್ಚಾದ ಆಕಾಂಕ್ಷಿಗಳು

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ರಾಮನಗರ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ಕಾರ್ಯಕರ್ತರ ಗೊಂದಲಕ್ಕೆ ಉತ್ತರ ಮತ್ತಷ್ಟು ಜಟಿಲವಾಗಿದ್ದು, ಇದೀಗ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಹೆಸರು ಕೇಳಿ ಬರುತ್ತಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲ ಪಕ್ಷಗಳಲ್ಲೂ ವಾಸ್ತವ್ಯ ಹೂಡಿ ಕಳೆದ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಪಿ.ನಾಗರಾಜು, ಕಳೆದ ಎರಡು ಮೂರು ವರ್ಷಗಳಿಂದಲೂ ಯಾವುದೇ ಪಕ್ಷದಲ್ಲಿ ಕಾಣಿಸಿಕೊಳ್ಳದೆ ತಟಸ್ಥವಾಗಿದ್ದರು. ಇದೀಗ ಅವರ ಹೆಸರು ಬಿಜೆಪಿ ವಲಯದಲ್ಲಿ ಮುಂಚೂಣಿಗೆ ಬಂದಿದೆ.
ಕೆಎಸ್‌ಐಸಿಎಲ್ ಅಧ್ಯಕ್ಷ ಗೌತಮ್‌ಗೌಡ ಪಕ್ಷ ಸಂಘಟನೆ ಮಾಡುತ್ತಿರುವ ಹೊರತಾಗಿಯೂ ಪಿ.ನಾಗರಾಜು ಅವರನ್ನು ಕಣಕ್ಕೆ ಇಳಿಸಬೇಕು ಎಂದು ಕೆಲವರು ಮುಂದಾಗಿದ್ದು, ಈಗಾಗಲೇ ಇದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಚಿವರ ಭೇಟಿ?
ಎರಡು ಬಾರಿ ಬಿಜೆಪಿಗೆ ಬಂದು ಪಕ್ಷ ತ್ಯಜಿಸಿದ್ದ ಪಿ.ನಾಗರಾಜು ಅವರನ್ನು ಮತ್ತೊಮ್ಮೆ ಬಿಜೆಪಿಗೆ ಸೇರಿಸಿಕೊಳ್ಳುವ ಹಠಕ್ಕೆ ಕೆಲ ಬಿಜೆಪಿ ಮುಖಂಡರು ಬಿದ್ದಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ರಾಜ್ಯದ ಸಚಿವರೊಬ್ಬರನ್ನು ನಾಗರಾಜು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿದ್ದು, ಇವರಿಂದ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ದೊರೆತಿದೆ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಆಪ್ತ ಬಳಗದಲ್ಲಿ ಪಿ.ನಾಗರಾಜು ಗುರುತಿಸಿಕೊಂಡಿದ್ದು, ಇವರೊಂದಿಗೂ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಟಿಕೆಟ್‌ಗೂ ಯತ್ನ
ಬಿಜೆಪಿ ಸೇರ್ಪಡೆ ಚರ್ಚೆ ಮುನ್ನೆಲೆಗೆ ಬರುವ ಮುನ್ನವೇ ಪಿ.ನಾಗರಾಜು ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಬೇಕು ಎಂದು ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಯತ್ನ ನಡೆಸಿದ್ದರು. ಇದಕ್ಕಾಗಿ ಇವರ ನೇತೃತ್ವದಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ಪಿ.ನಾಗರಾಜು ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ, ಸ್ಥಳೀಯ ಕೆಲ ಕಾಂಗ್ರೆಸ್ ಮುಖಂಡರು ತಮ್ಮ ಯತ್ನಕ್ಕೆ ಎಳ್ಳು ನೀರು ಬಿಟ್ಟಿದ್ದು, ಗುಟ್ಟಾಗಿ ಉಳಿದಿಲ್ಲ.

ಉಳಿದವರ ಕಥೆ ಏನು?;
ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಸಾಲು ಸಾಲು ಆಕಾಂಕ್ಷಿಗಳಿದ್ದಾರೆ. ಆದರೆ, ಗೌತಮ್‌ಗೌಡ ಅವರನ್ನು ಮುನ್ನೆಲೆಗೆ ತರುವ ಮೂಲಕ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಕ್ಷದ ಬಲವರ್ಧನೆಗೆ ಮುಂದಾಗಿದ್ದರು. ಆದರೆ, ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳಿಗೆ ಬರ ಇಲ್ಲ ಎನ್ನುವಂತಾಗಿದೆ. ಇತ್ತೀಚೆಗೆ ಪಕ್ಷ ಸೇರಿರುವ ಡಾ.ಪುಣ್ಯವತಿ ಅವರೂ ಟಿಕೆಟ್‌ಗಾಗಿ ತಮ್ಮದೇ ಮಾರ್ಗದ ಮೂಲಕ ಪ್ರಯತ್ನಿಸುತ್ತಿದ್ದರೆ, ಈಗ ಪಿ.ನಾಗರಾಜು ಹೆಸರು ಕೇಳಿ ಬಂದಿರುವುದು ಅಭ್ಯರ್ಥಿ ಆಯ್ಕೆಯನ್ನು ಕಗ್ಗಂಟು ಮಾಡಿದೆ.

ಕಾಂಗ್ರೆಸ್‌ನಲ್ಲಿ ವಲಸೆ
ಒಂದು ವೇಳೆ ಪಿ.ನಾಗರಾಜು ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ದೊರೆತರೆ ಕಾಂಗ್ರೆಸ್‌ನ ಪ್ರಮುಖರು ಅವರೊಟ್ಟಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವುದು ನಿಶ್ಚಿತ. ಕಾಂಗ್ರೆಸ್‌ನ ಕೆಲವು ಸ್ಥಳೀಯ ಮುಖಂಡರು ಇಕ್ಬಾಲ್ ಹುಸೇನ್ ಸ್ಪರ್ಧೆಗೆ ವಿರೋಧಿಸಿದ್ದಾರೆ. ಆದರೆ ಡಿ.ಕೆ.ಸಹೋದರರ ಎದುರು ಮಾತನಾಡುವ ಧೈರ್ಯ ಸಾಲದೆ ಅನಿವಾರ್ಯವಾಗಿ ಪಕ್ಷ ಸಂಘಟನೆಯಲ್ಲಿದ್ದು, ಪಿ.ನಾಗರಾಜು ಬಿಜೆಪಿ ಸೇರಿದರೆ ಅವರ ಹಿಂದೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮನಗರ ಬಿಜೆಪಿಯಲ್ಲಿ ಪಿ.ನಾಗರಾಜು ತಲ್ಲಣ ಆರಂಭಗೊಂಡಿದ್ದು, ಭಾಜಪಾದ ನಿರ್ಧಾರ ಕಾಂಗ್ರೆಸ್- ಬಿಜೆಪಿಯಲ್ಲಿ ಬದಲಾವಣೆ ತರಲಿದೆ.

ಬಾಕ್ಸ್
2008ರ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪಿ.ನಾಗರಾಜು 51,072 ಮತಗಳನ್ನು ಪಡೆಯುವ ಮೂಲಕ ಗೆಲುವಿನ ಸನಿಹಕ್ಕೆ ಬಂದಿದ್ದರು. ಈ ವೇಳೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಎಚ್.ಸಿ.ಬಾಲಕೃಷ್ಣ 75,991 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಕಲ್ಪನಾ ಶಿವಣ್ಣ 10,399ಮತಗಳನ್ನು ಪಡೆದಿದ್ದರು. ಇದರ ಹೊರತಾಗಿಯೂ ಬಮುಲ್ ನಿರ್ದೇಶಕರಾಗಿ ಸತತವಾಗಿ ಗೆಲುವು ಸಾಧಿಸುತ್ತಿರುವ ಪಿ.ನಾಗರಾಜು ಅವರು ಎಂಪಿಸಿಎಸ್‌ಗಳ ಮೂಲಕ ಮತದಾರರ ಹಿಡಿತ ಸಾಧಿಸಿದ್ದಾರೆ.