ಬಿಡದಿ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯ ಟೋಲ್ ದರ ಕಡಿಮೆ ಮಾಡಿ ಹಾಗೂ ಟೋಲ್ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಕಣಮಿಣಕಿ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದರು.
ಸ್ವಾಭಿಮಾನಿ ಸೇನೆ ಅಧ್ಯಕ್ಷ ನಿಂಗರಾಜುಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಟೋಲ್ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಉದ್ಘಾಟನೆಯಾಗಿ ವರ್ಷವೂ ಕಳೆದಿಲ್ಲ. ಹಲವು ಬಾರಿ ದರ ಹೆಚ್ಚಳ ಮಾಡಿ ವಾಹನ ಸವಾರರ ಮೇಲೆ ಹೆದ್ದಾರಿ ಪ್ರಾಧಿಕಾರ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಿಂಗರಾಜುಗೌಡ, ಹೆದ್ದಾರಿಯ ಶ್ರೀರಂಗಪಟ್ಟಣದ ಬಳಿ ಇತ್ತೀಚೆಗೆ ಟೋಲ್ ಪ್ರಾರಂಭ ಮಾಡಲಾಗಿದೆ. ಅಲ್ಲಿ ಇನ್ನೂ ರಸ್ತೆ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಟೋಲ್ ಕೇಂದ್ರ ಓಪನ್ ಮಾಡಿ ಹಣ ಸಂಗ್ರಹಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಬೆಂಗಳೂರಿನಿಂದ ಮೈಸೂರುವರೆಗೆ ಹೆದ್ದಾರಿಯಲ್ಲಿ ಎಲ್ಲಿಯೂ ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಇವೆಲ್ಲವನ್ನೂ ನೀಡದೆ ಕೇವಲ ಹಣ ವಸೂಲಿ ಮಾಡುತ್ತಿರುವುದು ಯಾವ ನ್ಯಾಯ ಎಂದು ಕಿಡಿ ಕಾರಿದರು.
50 ಲಕ್ಷ ಪರಿಹಾರ ನೀಡಿ
ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಯಾದ ನಂತರದ ಕೆಲವೇ ದಿನಗಳಲ್ಲಿ ಹತ್ತಾರು ಅಪಘಾತಗಳು ನಡೆದಿವೆ. ಹಲವರ ಪ್ರಾಣಕ್ಕೆ ಹಾನಿಯಾಗಿದೆ, ಕೆಲವರಿಗೆ ಗಾಯಗಳಾಗಿವೆ. ಇದಕ್ಕೆಲ್ಲ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವೇ ಕಾರಣ. ಈಗಾಗಲೇ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿ ಪರಿಶೀಲನೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಹೆದ್ದಾರಿಯಲ್ಲಿ ಅಪಘಾತ ನಡೆದು ಮೃತಪಟ್ಟಿರುವವರ ಕುಟುಂಬದವರಿಗೆ ಹೆದ್ದಾರಿ ಪ್ರಾಧಿಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕನ್ನಡಿಗರಿಗೆ ಆದ್ಯತೆ ನೀಡಿ
ಟೋಲ್ ಪ್ಲಾಜಾಗಳ ಬಳಿ ವಾಹನಗಳಿಂದ ಹಣ ಸಂಗ್ರಹಣೆ ಮಾಡುವ ಗುತ್ತಿಗೆಯನ್ನು ಹೊರ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗಿದೆ. ಹಾಗಾಗಿ ಗುತ್ತಿಗೆದಾರರು ಟೋಲ್ ಪ್ಲಾಜಾದಲ್ಲಿ ತಮ್ಮ ರಾಜ್ಯದವರನ್ನೇ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಇದರಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಹಾಗಾಗಿ ಟೋಲ್ ಪ್ಲಾಜಾಗಳಲ್ಲಿ ರಾಜ್ಯದವರಿಗೇ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ನಿಂಗರಾಜು ಗೌಡ ಒತ್ತಾಯ ಮಾಡಿದರು.
ಟೋಲ್ ಪ್ಲಾಜಾ ಮುತ್ತಿಗೆಗೆ ಯತ್ನ
ಮನವಿ ಸ್ವೀಕರಿಸಲು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಮಯ ಕಳೆದರೂ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಟೋಲ್ ಪ್ಲಾಜಾಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಬೇರೆಡೆಗೆ ಕರೆದೊಯ್ದರು.
ಸಂಟನೆ ಪ್ರಧಾನ ಕಾರ್ಯದರ್ಶಿ ಸುರೇಶ್ಗೌಡ , ಕಾರ್ಯದರ್ಶಿ ಸೃಜನಮೂರ್ತಿ, ಖಜಾಂಚಿ ಶ್ರೀಧರನಾಯಕ್, ರಥನ್ ಪೂಜಾರಿ, ನವೀನ್, ಸುರೇಶ್ ಗಾಂಧಿ, ಮಹಿಳಾ ಟಕದ ಸುವರ್ಣಮ್ಮ, ಅನುರಾಧ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.