ಬಿಡದಿ
ನಮ್ಮ ಅಧಿಕಾರದ ಅವಧಿಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಮಲ್ಲೇಶ್ ಹೇಳಿದರು.
ಪಟ್ಟಣದ ರೋಟರಿ ಸಂಸ್ಥೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಡದಿ ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಸಂಸ್ಥೆಯಿಂದ ಭರತ್ ಕೆಂಪಣ್ಣ ಆಸ್ಪತ್ರೆಯ ಸಹಯೋಗದಲ್ಲಿ ಡಯಾಲಿಸಿಸ್ ಸೆಂಟರ್ ತೆರೆಯಲಾಗಿದ್ದು, ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುತ್ತಿದೆ ಎಂದರು.
ಒಂದು ವರ್ಷದಲ್ಲಿ ಈ ಭಾಗದ 2000 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಣೆ, ಮಹಿಳಾ ಸಬಲೀಕರಣದ ಹೆಸರಿನಲ್ಲಿ 25 ವಿದ್ಯಾರ್ಥಿನಿಯರಿಗೆ ಸೈಕಲ್, 50 ಮಂದಿ ವಿಕಲಚೇತನರಿಗೆ ವೀಲ್ಚೇರ್, ರಕ್ತದಾನ ಶಿಬಿರ ಆಯೋಜನೆ ಮಾಡಿ 780 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ರೋಟರಿ ಸಂಸ್ಥೆಯಿಂದ ಹೋಬಳಿ ಮಟ್ಟದ ಕಬ್ಬಡಿ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿತ್ತು. ನೆಲ್ಲಿಗುಡ್ಡೆ ಕೆರೆ ಸೇರಿ ಸರ್ಕಾರಿ ಶಾಲಾ ಆವರಣಗಳಲ್ಲಿ ನೂರಾರು ಗಿಡಗಳನ್ನು ನೆಡಲಾಗಿದೆ. ಈ ಸೇವೆಗಳನ್ನು ಗುರುತಿಸಿ ಸಂಸ್ಥೆಗೆ ನೇಷನ್ಸ್ ಬಿಲ್ಡ್ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳು ಸಂದಿವೆ ಎಂದರು.
ಸದಸ್ಯರಾದ ಚಿಕ್ಕಣ್ಣಯ್ಯ, ಬಸವರಾಜ್ ಅರಸ್, ಶಿವಶಂಕರ್, ವಸಂತ್ ಕುಮಾರ್, ರೇಣುಕಪ್ಪ, ಶಿವಸ್ವಾಮಿ, ಭರತ್ ಕೀರ್ತಿ ಇದ್ದರು.