ಬಿಡದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೆ ಇವೆ. ಪ್ರಾಣ ಹಾನಿಗಳು ಸಂಭವಿಸುತ್ತಿವೆ ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚೆತ್ತು ವಾಹನ ಸವಾರರಿಗೆ ಸುರಕ್ಷತಾ ಕ್ರಮಗಳ ಪಾಠ ಮಾಡಿದ್ದಾರೆ.
ಹೌದು ದಶಪಥ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ವಾಹನಗಳ ಅತಿ ವೇಗದ ಚಾಲನೆಯಿಂದ ಅಪಘಾತಗಳು ಸಹ ಭೀಕರವಾಗಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಗಳ ಬಗ್ಗೆ ಕರಪತ್ರಗಳನ್ನ ಹಂಚುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಿದ್ದಾರೆ.
ಕಣಮಿಣಿಕೆ ಟೋಲ್ ಬಳಿ ಜಾಗೃತಿ: ಬೆಂಗಳೂರಿನಿಂದ ಮೈಸೂರಿಗೆ ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳು ಕಣಮಿಣಿಕೆ ಬಳಿ ಇರುವ ಟೋಲ್ ಪ್ಲಾಜಾದ ಬಳಿ ಹಣ ಕಟ್ಟಿ ಮುಂದೆ ಸಾಗಬೇಕು. ಹಾಗಾಗಿ ಕುಂಬಳಗೂಡು ಪೊಲೀಸರು ಟೋಲ್ ಪ್ಲಾಜಾದ ಬಳಿ ಮೈಕ್ ಮೂಲಕ ಸುರಕ್ಷತಾ ಕ್ರಮಗಳ ಬಗ್ಗೆ ವಾಹನಗಳ ಚಾಲಕರಿಗೆ ಪಾಠ ಮಾಡಿದ್ದಾರೆ. ಟೋಲ್ ಪ್ಲಾಜಾದ ಬಳಿ ವಾಹನಗಳು ಹಣ ಕಟ್ಟಲು ನಿಲ್ಲುತ್ತವೆ. ಹಾಗಾಗಿ ಈ ಜಾಗವನ್ನ ಆಯ್ಕೆ ಮಾಡಿಕೊಂಡ ಪೊಲೀಸರು ಕೈಯಲ್ಲಿ ಮೈಕ್ ಹಿಡಿದು ಹಲವು ಸುರಕ್ಷತಾ ಕ್ರಮಗಳ ಬಗ್ಗೆ ತಿಳಿ ಹೇಳಿದ್ದಾರೆ.
ಕರಪತ್ರಗಳ ಹಂಚಿಕೆ: ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ಮುಂದಾಗಿರುವ ಪೊಲೀಸರು ಜಿಲ್ಲೆಯ ಅಯಾ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಬರುವ ಹೆದ್ದಾರಿಯಲ್ಲಿ ನಿಂತ್ತು ವಾಹನಗಳನ್ನ ತಡೆದು ಚಾಲಕರಿಗೆ ವಾಹನ ಸವಾರರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಇರುವ ಕರ ಪತ್ರಗಳನ್ನ ಹಂಚಿಕೆ ಮಾಡಿ ಅಪಘಾತಗಳ ತಡೆಗೆ ಮುಂದಾಗಿದ್ದಾರೆ. ದಯವಿಟ್ಟು ಚಾಲಕರು ತಮ್ಮ ವಾಹನಗಳನ್ನ ನಿದಾನವಾಗಿ ಚಲಾಯಿಸಿ ಎಂದು ಪೊಲೀಸರು ಮನವಿ ಕೂಡ ಮಾಡಿದ್ದಾರೆ.
ಪೊಲೀಸರ ಸುರಕ್ಷತಾ ಕ್ರಮಗಳು: ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳ ತಡೆಗೆ ಜಿಲ್ಲಾ ಪೊಲೀಸರು ಹಲವು ಸುರಕ್ಷತಾ ಕ್ರಮಗಳನ್ನ ಕೈಗೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಐಎಸ್.ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸಿ, ನಿಧಾನವೇ ಪ್ರಧಾನ ಅತೀವೇಗ ಅಪಾಯಕಾರಿ, ಹೆದ್ದಾರಿಯಲ್ಲಿರುವ ಪಥಗಳನ್ನ ಶಿಸ್ತುಬದ್ದವಾಗಿ ಪಾಲನೆ ಮಾಡಿ , ಕುಡಿದು ವಾಹನ ಚಾಲನೆ ಮಾಡಬೇಡಿ, ಹೆದ್ದಾರಿಯಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಬೇಡಿ, ಎಡಬದಿಯಿಂದ ಓವರ್ ಟೇಕ್ ಮಾಡಬೇಡಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ, ಪಾದಚಾರಿಗಳಿಗೆ ಆದ್ಯತೆ ನೀಡಿ, ಸೀಟ್ ಬೆಲ್ಟ್ ಧರಸಿ, ಮುಂದಿನ ವಾಹನಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಹೀಗೆ ಹಲವು ಸುರಕ್ಷತಾ ಕ್ರಮಗಳನ್ನ ಅನುಸರಿಸಿ ಎಂದು ವಾಹನ ಚಾಲಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.