ಜಿಲ್ಲೆ

ತಿಳಿಯುತ್ತಿಲ್ಲ ಸಾವಿರ ಲೆಕ್ಕದ ಬಿಲ್ ಮರ್ಮ ವಿದ್ಯುತ್ ದರ ಏರಿಕೆಯಿಂದ ಗ್ರಾಹಕರು ಕಂಗಾಲು

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ವಿದ್ಯುತ್ ಬಿಲ್ ಶಾಕ್‌ಗೆ ಜನ ಮೂರ್ಛೆ ಹೋಗುತ್ತಿದ್ದು, ಉಚಿತಕ್ಕೂ ಮೊದಲು ಗ್ರಾಹಕರಿಗೆ ಬೆಸ್ಕಾಂ ಭಾರೀ ಹೊಡೆತ ನೀಡುತ್ತಿದೆ.

ಕಳೆದ ತಿಂಗಳವರೆಗೂ ನೂರರ ಲೆಕ್ಕದಲ್ಲಿ ಬಿಲ್ ಪಾವತಿ ಮಾಡುತ್ತಿದ್ದ ಗ್ರಾಹಕರಿಗೆ ಈಗ ಸಾವಿರ ಲೆಕ್ಕದ ಬಿಲ್ ಬರುತ್ತಿದೆ. ಯಾವ ರೀತಿ ಲೆಕ್ಕಹಾಕಿದರೂ ಬಿಲ್‌ನ ಮರ್ಮ ತಿಳಿಯುತ್ತಿಲ್ಲ. ಆದರೆ, ವಿದ್ಯುತ್ ದರ ಏರಿಕೆ ಆಗಿದ್ದು, ಇದನ್ನು ಏಪ್ರಿಲ್‌ನಿಂದಲೇ ಜಾರಿಗೆ ತಂದಿರುವ ಕಾರಣ ಬಾಕಿ ಮೊತ್ತವೂ ಸೇರಿ ಜೂನ್ ಬಿಲ್ ಬಂದಿದೆ ಎನ್ನುವ ಬೆಸ್ಕಾಂ ಉತ್ತರ ಜನರಿಗೆ ತೃಪ್ತಿಯಾಗುತ್ತಿಲ್ಲ.

ಮೇ ತಿಂಗಳವರೆಗೂ 400 ರೂ. ಆಸುಪಾಸಿನಲ್ಲೇ ಬಿಲ್ ಪಡೆಯುತ್ತಿದ್ದ ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದ ವ್ಯಕ್ತಿಯೊಬ್ಬರಿಗೆ ಜೂನ್ ಬಿಲ್ ನೋಡಿ ಶಾಕ್ ಆಗಿದೆ. ಏಪ್ರಿಲ್‌ನಲ್ಲಿ ಕೇವಲ 53 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದು, ಇದರ ಬಿಲ್ ಮೇನಲ್ಲಿ ನೀಡಿ 328 ರೂ.ಶುಲ್ಕ ವಿಧಿಸಿದ್ದಾರೆ. ಆದರೆ, ಮೇ ತಿಂಗಳಲ್ಲಿ 278 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೀರಿ, 2562 ರೂ.ಗಳನ್ನು ಪಾವತಿ ಮಾಡಿ ಎಂದು ಜೂನ್‌ನಲ್ಲಿ ಬಿಲ್ ನೀಡಿರುವ ಸಿಬ್ಬಂದಿ, ಗ್ರಾಹಕರಿಗೆ ಶಾಕ್ ನೀಡಿದ್ದಾರೆ. ಇದು ಕೇವಲ ಒಂದು ಊರಿನ ಅಥವಾ ಒಂದು ಸಂಪರ್ಕದ ಕತೆ ಮಾತ್ರವಲ್ಲದೆ ಸಂಪೂರ್ಣ ಗ್ರಾಹಕರ ವ್ಯಥೆಯಾಗಿದೆ.

ಬೆಸ್ಕಾಂ ಹೇಳೋದೆ ಬೇರೆ: ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಿಸಿದೆ. ಇದು ಕಳೆದ ಏ.1ರಿಂದ ಪೂರ್ವಾನ್ವಯವಾಗಲಿದೆ. ಇದಕ್ಕೂ ಮೊದಲು ಬಳಕೆ ಸ್ಲಾೃಬ್‌ಗಳನ್ನು ಮಾಡಿದ್ದು, ಅದಕ್ಕೆ ತಕ್ಕಂತೆ ಬಿಲ್ ಮೊತ್ತ ಏರಿಕೆ ಆಗುತ್ತಿತ್ತು. ಆದರೆ, ಈಗ ಬೆಲೆ ಏರಿಕೆ ನಂತರ 100 ಯೂನಿಟ್ ಬಳಕೆಯವರೆಗೆ 4.75 ರೂ.ಗಳನ್ನು ಪ್ರತಿ ಯೂನಿಟ್‌ಗೆ ದರ ನಿಗದಿಪಡಿಸಲಾಗಿದ್ದು, 100 ಯೂನಿಟ್‌ಗಿಂತ ಹೆಚ್ಚಿಗೆ ಬಳಕೆ ಮಾಡಿದರೆ, ಗ್ರಾಹಕರೂ ಸಂಪೂರ್ಣವಾಗಿ ಪ್ರತಿ ಯೂನಿಟ್‌ಗೆ 7 ರೂ.ನಂತೆ ಬಿಲ್ ಪಾವತಿ ಮಾಡಬೇಕು. (100 ಯೂನಿಟ್ ನಂತರ ಹೆಚ್ಚಿಗೆ 10 ಯೂನಿಟ್ ಬಳಕೆ ಮಾಡಿದರೂ ಗ್ರಾಹಕರು 110 ಯೂನಿಟ್‌ಗಳ ಬಿಲ್ ಕಟ್ಟಬೇಕು).

ಅಲ್ಲದೆ, ದರ ಏ.1ರಿಂದಲೇ ಪೂರ್ವಾನ್ವಯವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ತಿಂಗಳ ಬಾಕಿ ಸೇರಿಸಿ ಬಿಲ್ ಕೊಡಲಾಗುತ್ತದೆ ಎನ್ನುತ್ತಾರೆ ಬೆಸ್ಕಾಂ ಸಿಬ್ಬಂದಿ. ಇದರ ಜತೆಗೆ ನಿಗದಿತ ಶುಲ್ಕವನ್ನು 85 ರೂ.ನಿಂದ 110 ರೂ.ಗೆ ಏರಿಕೆ ಮಾಡಲಾಗಿದೆ.

ಸಿಬ್ಬಂದಿಯೂ ಹೈರಾಣ: ಬಿಲ್ ಮೊತ್ತ ಹೆಚ್ಚಳದಿಂದ ಕಂಗಾಲಾಗಿರುವ ಗ್ರಾಹಕರು ಪ್ರತಿದಿನ ಬೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ನೂರರ ಲೆಕ್ಕದಲ್ಲಿದ್ದ ಬಿಲ್ ಸಾವಿರಕ್ಕೆ ಏರಿದ್ದರಿಂದ ಆತಂಕಕ್ಕೆ ಒಳಗಾದ ಗ್ರಾಹಕರು, ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಇದಕ್ಕೆ ಉತ್ತರಿಸಲಾಗದೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಮೀಟರ್ ರೀಡಿಂಗ್ ಸಿಬ್ಬಂದಿ ಬಿಲ್ ಕೊಡಲು ನಾವು ಹೋಗಲ್ಲ ಎನ್ನುವಷ್ಟೂ ಆತಂಕದ ವಾತಾರವಣ ನಿರ್ಮಾಣವಾಗಿದೆ.

ಈ ಗೊಂದಲವನ್ನು ಕೂಡಲೇ ಬೆಸ್ಕಾಂ ಮತ್ತು ಸರ್ಕಾರ ಪರಿಹಾರ ಮಾಡಬೇಕಿದೆ.

ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದ್ದು, ಏ.1ರಿಂದಲೇ ಪೂರ್ವಾನ್ವಯವಾಗಿದೆ. ಹೊಸ ದರದಂತೆ ಬಿಲ್ ಕೊಡಲಾಗುತ್ತಿದೆ. ಆದರೂ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಸರು ಹೇಳಲಿಚ್ಚಿಸದ ಬೆಸ್ಕಾಂ ಅಧಿಕಾರಿ.