ಜಿಲ್ಲೆ

ಸಾಲ ಮನ್ನಾಕ್ಕಾಗಿ ಕಾಯಬೇಡಿ ರೈತರಿಗೆ ಡಿ.ಕೆ.ಸುರೇಶ್ ಕಿವಿಮಾತು

ಬಿಡದಿ

ಸಾಲ ಮನ್ನಾ ಆಗುತ್ತೆ ಎಂದು ಕಾದುಕುಳಿತ ಹಲವು ರೈತರು ರೈತರು ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿಸಿ ಹೆಚ್ಚಿನ ಸಾಲ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದುವಂತೆ ಸಂಸದ ಡಿ.ಕೆ. ಸುರೇಶ್ ಕಿವಿಮಾತು ಹೇಳಿದರು.

ಪಟ್ಟಣದ ರೇಷ್ಮೆ ಇಲಾಖೆ ಆವರಣದಲ್ಲಿ ಬಿಡಿಸಿಸಿ ಬ್ಯಾಂಕ್ ಹಾಗೂ ರೈತ ಸೇವಾ ಸಹಕಾರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೆಸಿಸಿ ಬೆಳೆ ಸಾಲದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ರೈತ ಸೇವಾ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆಗೆ ಸಾಲದ ವಹಿವಾಟು ನಡೆಸುತಿದ್ದವು. ಆಗಸಾಲ ಪಡೆಯಲು ಹರಸಹಾಸ ಪಡಬೇಕಾಗಿತ್ತು. ಆದರೆ ಈಗ ಸಹಕಾರ ಸಂಘಗಳು ಬಿಡಿಸಿಸಿ ಬ್ಯಾಂಕ್ ಜತೆಗೆ ವಹಿವಾಟು ನಡೆಸುತ್ತಿರುವ ಕಾರಣ ರೈತರ ಬಳಿ ಜಮೀನಿನ ಪಹಣಿ ಇದ್ದರೆ ಸಾಕು ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂದರು.

ಕೊಟ್ಟ ಭರವಸೆ ಈಡೇರಿಸಿದ್ದೇವೆ

ನುಡಿದಂತೆ ನಡೆವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಚುನಾವಣೆ ಮುನ್ನ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಅಕ್ಕಿ ನೀಡುತ್ತೇವೆ ಎಂದಿದ್ದೆವು, ದೆಹಲಿಯಿಂದ ಅಕ್ಕಿ ಕೊಡಲಿಲ್ಲ. ಹಾಗಾಗಿ ನೇರವಾಗಿ ಹಣವನ್ನೇ ಲಾನುಭವಿಗಳ ಖಾತೆಗೆ ಹಾಕಲಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿದರು.

ವಿರೋಧ ಪಕ್ಷಗಳಿಗೆ ಹೊಟ್ಟೆ ಹುರಿ

ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ನೋಡಿ ಹೊಟ್ಟೆ ಉರಿಯಾಗಿದೆ. ಅದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಉಚಿತ ವಿದ್ಯುತ್, 2000 ಹಣ, ಉಚಿತ ಬಸ್ ಪ್ರಯಾಣ ಮಾಡಬೇಡಿ ಎಂದು ಬಹಿರಂಗವಾಗಿ ಹೇಳಲಿ ಎಂದು ಡಿ.ಕೆ. ಸುರೇಶ್ ಸವಾಲು ಹಾಕಿದರು.

ಬ್ರಿಟಿಷ್ ಸರ್ಕಾರ

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ರೈತರ ಪರ ಚಿಂತನೆ ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಇದರಿಂದ ಬಿಜೆಪಿಯವರಿಗೆ ರೈತರ ಮೇಲೆ ಕಾಳಜಿ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಇವರದು ಬ್ರಿಟಿಷ್ ಸರ್ಕಾರದ ನಡವಳಿಕೆ ಎಂದು ಗುಡುಗಿದರು.

ಕಾದು ಸುಸ್ತಾದ ರೈತರು

ಬೆಳಗ್ಗೆ 10.30ಕ್ಕೆ ಸಾಲದ ಚೆಕ್ ವಿತರಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಸಮಯಕ್ಕೆ ಸರಿಯಾಗಿ ಬಂದಿದ್ದ ಲಾನುಭವಿಗಳು ಕೂಡ ಗಣ್ಯರ ಆಗಮನಕ್ಕೆ ಕಾಯುತ್ತಿದ್ದರು. ಆದರೆ ಗಣ್ಯರು ವೇದಿಕೆಗೆ ಆಗಮಿಸಿದ್ದು ಮಧ್ಯಾಹ್ನ 1 ಗಂಟೆಗೆ. ಒಟ್ಟು 120 ಲಾನುಭವಿಗಳಿಗೆ 1 ಕೋಟಿ ರೂ. ಮೊತ್ತದ ಸಾಲ ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಬಿಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಮಂಜುನಾಥ್, ಬಿಡದಿ ರೈತ ಸೇವಾ ಸಹಕಾರ ಸಂಘದ ಪ್ರಭಾರ ಅಧ್ಯಕ್ಷ ರಾಮಯ್ಯ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಜಿಪಂ ಮಾಜಿ ಸದಸ್ಯ ಚಂದ್ರಣ್ಣ, ಪುರಸಭೆ ಸದಸ್ಯರಾದ ರಾಮಚಂದ್ರಯ್ಯ, ಉಮೇಶ್, ಸಂಘದ ನಿರ್ದೇಶಕರಾದ ನರಸಿಂಹಯ್ಯ, ನೀಲಮ್ಮ, ಕುಮಾರ್ ಇದ್ದರು.