ರಾಮನಗರ: ಕಡವೆಕೊಂಡು ಮಾಂಸವನ್ನು ಹಂಚಿಕೊಂಡು ಬಸ್‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹಾರೋಹಳ್ಳಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತೇರು ಬೀದಿ ಗ್ರಾಮದ ವೆಂಕಟೇಶ ಬಂಧಿತ ಬೇಟೆಗಾರ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಾಮ್ರದೋಣಿ ಬಳಿ ತನ್ನ ಇತರ 7 ಮಂದಿ ಸಹಚರರೊಂದಿಗೆ ಬೇಟೆಯಾಡಿ, ಕಡವೆಯನ್ನು ಅಲ್ಲೇ ಬಿಟ್ಟು ಬಂದಿದ್ದರು. ಆನಂತರ ಮತ್ತೆ ಹೋಗಿ ಕಡವೆ ಮಾಂಸವನ್ನು 8 ಭಾಗಗಳಾಗಿ ಹಂಚಿಕೊಂಡಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಬಸ್‌ನಲ್ಲಿ ಮಾಂಸ ಸಾಗಿಸುತ್ತಿದ್ದ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ರಾಮಚಂದ್ರ, ನಾಗೇಶ್, ಬಸವರಾಜು, ರಾಮನೂರ್ತಿ, ಕೃಷ್ಣಪ್ಪ ಸೇರಿದಂತೆ ಒಟ್ಟು 7 ಮಂದಿಗಾಗಿ ಹುಡುಕಾಟ ನಡೆದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜ್‌ಕುಮಾರ್, ವಿಶಾಲ್, ವೈಧ್ಯಾಧಿಕಾರಿ ಡಾ.ಕಿರಣ್ ಮುಂತಾದವರು ಇದ್ದರು.